ADVERTISEMENT

ಎಲ್.ಜಿ ದಾಸ್ತಾನು ಮಳಿಗೆಗೆ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 18:30 IST
Last Updated 5 ಫೆಬ್ರುವರಿ 2012, 18:30 IST

ನೆಲಮಂಗಲ/ಬೆಂಗಳೂರು: ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಎಲ್.ಜಿ. ಕಂಪೆನಿ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಸಮೀಪದ ಮೈಲನಹಳ್ಳಿ ಬಳಿಯ 5.2 ಎಕರೆ ಪ್ರದೇಶದಲ್ಲಿ ಒಂದು ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ರೂ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ದಾಸ್ತಾನು ಮಳಿಗೆ ನಿರ್ಮಿಸಲಾಗಿತ್ತು. ಮಳಿಗೆಯನ್ನು ಎಲ್.ಜಿ. ಕಂಪೆನಿಗೆ ಬಾಡಿಗೆಗೆ ನೀಡಲಾಗಿತ್ತು. ಬೆಂಕಿ ಅನಾಹುತದಿಂದ ದಾಸ್ತಾನು ಮಳಿಗೆ ಮತ್ತು ಅದರೊಳಗೆ ಸಂಗ್ರಹಿಸಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.

ಉಗ್ರಾಣದ ಉಸ್ತುವಾರಿ ವಹಿಸಿಕೊಂಡಿದ್ದ ಸತ್ಯ ಭಾನುವಾರ ಬೆಳಿಗ್ಗೆ ಕರ್ತವ್ಯಕ್ಕೆ ಆಗಮಿಸಿದಾಗ ಸಣ್ಣದೊಂದು ಬೆಂಕಿ ಕಿಡಿ ಕಂಡು ಗಾಬರಿಗೊಂಡರು. ತಕ್ಷಣವೇ ಬೆಂಕಿ ನಂದಿಸಲು ಮುಂದಾಗುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಇಡೀ ಉಗ್ರಾಣವನ್ನು ಆಕ್ರಮಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ಆಕಸ್ಮಿಕದಿಂದ ಉಗ್ರಾಣದಲ್ಲಿದ್ದ ಬೆಲೆ ಬಾಳುವ ಟಿವಿ, ಕಂಪ್ಯೂಟರ್, ಬಟ್ಟೆ ಒಗೆಯುವ ಯಂತ್ರ, ಮೈಕ್ರೊ ಓವನ್, ರೆಫ್ರಿಜರೇಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೃಹತ್ ಮಳಿಗೆ ನಿರ್ಮಾಣ ಕಾರ್ಯ ಕಳೆದ ಜನವರಿ ತಿಂಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಜ.15ರಿಂದ ಉಗ್ರಾಣದಲ್ಲಿ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಕಳೆದ 20 ದಿನಗಳಿಂದ ಸಂಗ್ರಹಿಸಿದ್ದ ಎಲ್ಲ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.

ತಡವಾಗಿ ಮಾಹಿತಿ: ದಾಸ್ತಾನು ಮಳಿಗೆ ಸಿಬ್ಬಂದಿ ಬೆಂಕಿ ಹೊತ್ತಿಕೊಂಡು ಎರಡು ಗಂಟೆಯಾದ ನಂತರ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 7.30ರ ಸುಮಾರಿಗೆ ದಾಸ್ತಾನು ಮಳಿಗೆಯ ಒಂದು ಮೂಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ತಾವೇ ಬೆಂಕಿ ಆರಿಸಲು ಯತ್ನಿಸಿದ್ದಾರೆ.

ಎರಡು ಗಂಟೆಗಳ ಕಾಲ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ನಮಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅಗ್ನಿ ನಂದಕ ವಾಹನಗಳು ಸ್ಥಳಕ್ಕೆ ಬರುವ ವೇಳೆಗೆ ಬೆಂಕಿ ಇಡೀ ಉಗ್ರಾಣವನ್ನು ಆವರಿಸಿಬಿಟ್ಟಿತ್ತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಕರೆ ಬಂದ ತಕ್ಷಣ ನೆಲಮಂಗಲ ಅಗ್ನಿಶಾಮಕ ಠಾಣೆಯಿಂದ ಎರಡು ವಾಹನಗಳನ್ನು ಕಳುಹಿಸಲಾಯಿತು. ಆದರೆ, ಬೆಂಕಿ ಇಡೀ ದಾಸ್ತಾನು ಮಳಿಗೆಯನ್ನೇ ಆಕ್ರಮಿಸಿದ್ದರಿಂದ ಬೆಂಗಳೂರು ನಗರದಿಂದ ಮತ್ತು ದೊಡ್ಡಬಳ್ಳಾಪುರದಿಂದ ವಾಹನಗಳನ್ನು ಕರೆಯಿಸಿಕೊಳ್ಳಲಾಯಿತು. ಸಂಜೆ ತನಕ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಇಷ್ಟು ದೊಡ್ಡ ದಾಸ್ತಾನು ಮಳಿಗೆಯಲ್ಲಿ ಅಗ್ನಿ ನಂದಕ ಸಲಕರಣೆಗಳಿರಲಿಲ್ಲ. ಇಲಾಖೆಯಿಂದ ಅವರು ನಿರಾಕ್ಷೇಪಣಾ ಪತ್ರವನ್ನೂ ಪಡೆದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಅನಾಹುತ ಹೇಗೆ ಸಂಭವಿಸಿದೆ ಎಂದು ಗೊತ್ತಾಗಿಲ್ಲ. ಬಾಲಾಜಿ ಎಂಬುವರು ದಾಸ್ತಾನು ಮಳಿಗೆಯನ್ನು ಇತ್ತೀಚೆಗಷ್ಟೇ ನಿರ್ಮಿಸಿದ್ದರು. ವೈರಿಂಗ್ ಕೆಲಸ ಅಚ್ಚುಕಟ್ಟಾಗಿ ಮಾಡಲಾಗಿದೆ. ಆದ್ದರಿಂದ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಬಹಳ ಕಡಿಮೆ ಇದೆ.

ರೆಫ್ರಿಜರೇಟರ್‌ಗಳಲ್ಲಿ ಎರಡು ಚಿಕ್ಕ ಟ್ಯೂಬ್‌ಗಳು ಇರುತ್ತವೆ. ಅದರಲ್ಲಿ ಫ್ರಿಯಾನ್ ಎಂಬ ರಾಸಾಯನಿಕ ತುಂಬಿರಲಾಗುತ್ತದೆ. ಇದಕ್ಕೆ ಸಣ್ಣ ಕಿಡಿ ಸೋಕಿದರೂ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ಕಾರಣದಿಂದಲೇ ಅನಾಹುತ ಸಂಭವಿಸಿದೆ ಎಂದುಕೊಂಡರೂ ಬೆಂಕಿ ಕಿಡಿ ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಬೇಕಾಗಿದೆ. ನೂರಾರು ರೆಫ್ರಿಜರೇಟರ್‌ಗಳನ್ನು ಒಂದರ ಮೇಲೆ ಒಂದನ್ನು ಇಡಲಾಗಿತ್ತು ಎಂದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಬ್ಬಂದಿ ಹರಸಾಹಸ: ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ 10.30ರಿಂದ ಸಂಜೆ ಆರು ಗಂಟೆಯ ವರೆಗೆ ಸತತವಾಗಿ ಏಳೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಎಲೆಕ್ಟ್ರಾನಿಕ್ ವಸ್ತುಗಳಿದ್ದ ಪರಿಣಾಮ ಬೆಂಕಿ ವೇಗವಾಗಿ ವ್ಯಾಪಿಸುತ್ತಿತ್ತು. ಅಲ್ಲದೆ ರಟ್ಟಿನ ಬಾಕ್ಸ್‌ನಲ್ಲಿ ವಸ್ತುಗಳನ್ನು ಪ್ಯಾಕ್ ಮಾಡಿದ್ದರಿಂದ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಸಂಜೆ ವೇಳೆಗೆ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು. ಅಗ್ನಿಶಾಮಕ ಸಿಬ್ಬಂದಿಯ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ವಿಭಾಗದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜೆ.ಎಚ್. ರವಿಶಂಕರ್ ಖುದ್ದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನೆಲಮಂಗಲ ವೃತ್ತದ ಇನ್‌ಸ್ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದೆಹಲಿಯಿಂದ ಅಧಿಕಾರಿಯೊಬ್ಬರು ಬಂದು ದೂರು ನೀಡುತ್ತಾರೆ ಎಂದು ದಾಸ್ತಾನು ಮಳಿಗೆ ಸಿಬ್ಬಂದಿ ತಿಳಿಸಿದ್ದಾರೆ. ಆದ್ದರಿಂದ ಪ್ರಕರಣ ದಾಖಲಾಗಿಲ್ಲ. ದೂರು ನೀಡಿದ ನಂತರವಷ್ಟೇ ನಷ್ಟದ ಪ್ರಮಾಣ ಎಷ್ಟೆಂದು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಏಷ್ಯಾದಲ್ಲೇ ದೊಡ್ಡ ದಾಸ್ತಾನು ಮಳಿಗೆ

ಕಂಪೆನಿ ಇಡೀ ಏಷ್ಯಾ ಖಂಡದಲ್ಲಿ ವಹಿವಾಟು ನಡೆಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ದಾಸ್ತಾನು ಮಳಿಗೆ ಇವೆ. ಆದರೆ ನೆಲಮಂಗಲದ ಸಮೀಪವಿರುವ ಈ ದಾಸ್ತಾನು ಮಳಿಗೆ ಎಲ್.ಜಿ. ಏಷ್ಯಾದಲ್ಲಿ ಹೊಂದಿರುವ ದಾಸ್ತಾನು ಮಳಿಗೆಗಳಲ್ಲಿ ಅತಿ ದೊಡ್ಡದು. ಬೃಹತ್ ದಾಸ್ತಾನು ಮಳಿಗೆಯ ತುಂಬಾ ಟಿ.ವಿ, ರೆಫ್ರಿಜರೇಟರ್ ಮುಂತಾದ ವಸ್ತುಗಳನ್ನು ತುಂಬಲಾಗಿತ್ತು. ಸೋಮವಾರ ವಸ್ತುಗಳನ್ನು ವಿವಿಧ ನಗರಗಳಲ್ಲಿರುವ ಶೋರೂಂಗಳಿಗೆ ರವಾನೆ ಮಾಡಬೇಕಾಗಿತ್ತು ಎಂದು ದಾಸ್ತಾನು ಮಳಿಗೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.