ADVERTISEMENT

ಎಲ್ಲೆಲ್ಲೂ ಮೊಳಗಿದ ಮಹಿಳಾ ದನಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 20:20 IST
Last Updated 8 ಮಾರ್ಚ್ 2014, 20:20 IST

ಬೆಂಗಳೂರು: ನಗರದ ವಿವಿಧೆಡೆ  ಸಂಘ ಸಂಸ್ಥೆಗಳು ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥ­ಪೂರ್ಣ­ವಾಗಿ ಆಚರಿಸಿದವು.

ಪ್ರಸ್ತುತ  ಮಹಿಳೆಯರು ಎದುರಿ­ಸುತ್ತಿರ­ುವ ಸವಾಲುಗಳು, ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರದ ನಡುವೆ ಇರುವ ಅಂತರದ ಬಗ್ಗೆ ವಿಚಾರಸಂಕಿರಣಗಳಲ್ಲಿ ಬೆಳಕು ಚೆಲ್ಲಲಾಯಿತು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಮಹಿಳಾ ಸಮಾ­ವೇಶದಲ್ಲಿ ಲೇಖಕಿ ಶಾಂತ ನಾಗರಾಜ್, ಚಿಂತಕಿ ಡಾ.ಸುಧಾ ಕಾಮತ್‌ ಅವರು ಮಹಿಳೆಯರ ಹಕ್ಕು ಹಾಗೂ ಕರ್ತವ್ಯದ ಬಗ್ಗೆ ಮಾತನಾಡಿದರು. ‘ಮಹಿಳೆಯ­ರನ್ನು ಅಡುಗೆ ಮನೆಗೆ ಸೀಮಿತಗೊ­ಸದೇ, ಆಕೆಯಲ್ಲಿ ಅಡಗಿರುವ ಅಪರಿಮಿತ  ಶಕ್ತಿಯನ್ನು ಜಾಗೃತಗೊಳಿಸುವ ಜವಾ­ಬ್ದಾರಿ ಪುರುಷರ ಮೇಲಿದೆ’ ಎಂದರು.
ರಾಷ್ಟ್ರೀಯ ಆಧುನಿಕ ಕಲಾ­ಗ್ಯಾಲರಿಯಲ್ಲಿ  4 ರಿಂದ 14ನೇ ಶತ­ಮಾನದ ಮಹಿಳೆಯರ ಕುರಿತಾದ ಚಿತ್ರಕಲಾ ಪ್ರದರ್ಶನ ನಡೆಯಿತು. ಕನ್ನಡ ಸಂಘರ್ಷ ಸಮಿತಿಯು ಲೇಖಕಿ ಎ.ಜಿ. ರತ್ನಾ ಕಾಳೇಗೌಡ ಅವರಿಗೆ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿ ಪ್ರದಾನ ಮಾಡಿತು.

ಆಸರೆ ಟ್ರಸ್ಟ್‌ ವತಿಯಿಂದ  ಅಂಜುಮಾಲಾ ಟಿ.ನಾಯಕ್‌, ಲಲಿತಾ ನಾರಾಯಣಸ್ವಾಮಿ, ಮಂಗಳಾ ಮೋಹನ್‌ ಅವರಿಗೆ ‘ನಿರ್ಭಯಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಿಳೆಯರಿಗೆ ಭದ್ರತೆ ಒದಗಿಸಿ ಎಂದು ಒತ್ತಾಯಿಸಿ ಬಿ–ಪ್ಯಾಕ್‌ ವತಿ­ಯಿಂದ ನಗರದ ಕ್ರೀಡಾಂಗಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಗೃತಿ ಜಾಥಾ  ನಡೆಯಿತು. ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಭಾಗವಹಿ­ಸಿ­ದ್ದರು.‘ಮಹಿಳೆಯರ ವಿರುದ್ಧ ನಡೆ­ಯುವ ದೌರ್ಜನ್ಯಗಳ ಬಗ್ಗೆ ದನಿ ಎತ್ತಿ’ ಎಂದು ಫಲಕ ಪ್ರದರ್ಶಿಸಲಾಯಿತು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ‘ದಿ ನೆಸ್ಟ್’ ಪ್ರಸೂತಿ ಕೇಂದ್ರದಲ್ಲಿ ತಾಯ್ತನದ ಸಂಭ್ರಮ ಆಚರಿಸುವ ಸ್ಪರ್ಧೆ ಏರ್ಪ­ಡಿ­ಸ­ಲಾಗಿತ್ತು. ಸ್ಪರ್ಧೆಯಲ್ಲಿ ಗರ್ಭಿಣಿಯರು ರ್‍ಯಾಂಪ್   ಮೇಲೆ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.