ADVERTISEMENT

‘ಎಸ್‌ಟಿಪಿ ಕಡ್ಡಾಯ ಆದೇಶಕ್ಕೆ ತಡೆ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:06 IST
Last Updated 14 ಡಿಸೆಂಬರ್ 2017, 19:06 IST
ನಗರದಲ್ಲಿ ಗುರುವಾರ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಮಾಹಿತಿ ನೀಡಿದರು. ಗೃಹ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್‌ ಆರ್‌. ಸಂಪತ್‌ರಾಜ್‌ ಇದ್ದಾರೆ
ನಗರದಲ್ಲಿ ಗುರುವಾರ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರು ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಮಾಹಿತಿ ನೀಡಿದರು. ಗೃಹ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್‌ ಆರ್‌. ಸಂಪತ್‌ರಾಜ್‌ ಇದ್ದಾರೆ   

ಬೆಂಗಳೂರು: ‘20 ಮನೆಗಳಿರುವ ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲಿ ಈಗಿರುವ ಆದೇಶದ ಪ್ರಕಾರ ತ್ಯಾಜ್ಯ ನೀರು ಸಂಸ್ಕರಣ (ಎಸ್‌ಟಿಪಿ) ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸುವ ಆದೇಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯಗಳಲ್ಲಿ ಎಸ್‌ಟಿಪಿ ಅಳವಡಿಸುವ ಬಗ್ಗೆ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಅವರು ಗುರುವಾರ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎಸ್‌ಟಿಪಿ ಕಡ್ಡಾಯಗೊಳಿಸಿದ್ದ ಆದೇಶ ಪುನರ್ ಪರಿಶೀಲಿಸುವಂತೆ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಹಾಗಾಗಿ ನಾವು ಹೊರಡಿಸಿದ್ದ ಆದೇಶವನ್ನು ಸದ್ಯಕ್ಕೆ ತಡೆಹಿಡಿಯುವ ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ, ಒಳಚರಂಡಿ ವ್ಯವಸ್ಥೆ ಇಲ್ಲವೋ ಅಂತಹ ಕಡೆ ಬಹುಮಹಡಿ ಸಂಕೀರ್ಣಗಳನ್ನು ನಿರ್ಮಿಸಿದರೆ, ಎಸ್‌ಟಿಪಿ ಅಳವಡಿಕೆ ಕಡ್ಡಾಯ’ ಎಂದು ತಿಳಿಸಿದರು.

ADVERTISEMENT

‘2016ರ ಜನವರಿಯಿಂದ ನಿರ್ಮಾಣವಾಗಿರುವ 20 ಮತ್ತು ಅದಕ್ಕಿಂತ ಮೇಲ್ಟಟ್ಟು ಮನೆಗಳಿರುವ ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಿಗೆ ಎಸ್‌ಟಿಪಿ ಅಳವಡಿಕೆಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದರಲ್ಲಿ ಸ್ವಲ್ಪ ಸಡಿಲಿಕೆ ನೀಡುವಂತೆ ಬಿಬಿಎಂಪಿಯಿಂದ ನಿರ್ಣಯ ಮಾಡಿ ಕಳುಹಿಸಿದ್ದಾರೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶದಲ್ಲಿ ಎಸ್‌ಟಿಪಿ ಕಡ್ಡಾಯ ಇರುವುದರಿಂದ, ಇದಕ್ಕೆ ಸಡಿಲಿಕೆ ನೀಡಲು ಸಾಧ್ಯವಿಲ್ಲ. ಈ ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದು, 50ಕ್ಕೂ ಹೆಚ್ಚಿನ ವಸತಿಗಳಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯ ಹಾಗೂ ಮುಂದೆ ನಿರ್ಮಾಣವಾಗುವ 20 ಮನೆಗಳಿರುವ ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲಿ ಎಸ್‌ಟಿಪಿ ಕಡ್ಡಾಯ ಅಳವಡಿಸಲು ಆದೇಶಿಸಲಾಗುವುದು' ಎಂದರು.

‘ವರ್ತೂರು, ಬೆಳ್ಳಂದೂರು ಹಾಗೂ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಎಸ್‌ಟಿಪಿ ಅಳವಡಿಕೆ ಕಡ್ಡಾಯದಿಂದ ವಿನಾಯಿತಿ ಇಲ್ಲ. ಎಸ್‌ಟಿಪಿ ಅಳವಡಿಸದಿದ್ದರೆ ನಿರಾಕ್ಷೇಣ ಪತ್ರ ನೀಡದಿರಲು ನಿರ್ಧರಿಸಲಾಗಿ. ಇದಕ್ಕೆ ಅಪಾರ್ಟ್‌ಮೆಂಟ್‌ ಮಾಲೀಕರ ಒಕ್ಕೂಟದ ಪ್ರತಿನಿಧಿಗಳೂ ಒಪ್ಪಿಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ಕೈಬಿಡುವಂತೆ ಪಾಲಿಕೆ ಸದ್ಯರು, ಇತ್ತೀಚೆಗೆ ನಡೆದ ವಿಶೇಷ ಕೌನ್ಸಿಲ್‌ ಸಭೆಯಲ್ಲೂ ಒತ್ತಾಯಿಸಿದ್ದರು.

ಗೃಹ ಸಚಿವ ರಾಮಲಿಂಗ ರೆಡ್ಡಿ, ಮೇಯರ್ ಆರ್.ಸಂಪತ್ ರಾಜ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್‌, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಜಿ.ವಿ.ರಂಗರಾವ್‌ ಸಭೆಯಲ್ಲಿ ಭಾಗವಹಿಸಿದ್ದರು.

ಅಪಾರ್ಟ್‌ಮೆಂಟ್‌ಗಳ ಒಕ್ಕೂಟ ಸ್ವಾಗತ
20 ಮನೆಗಳಿರುವ ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳಲ್ಲಿ ಎಸ್‌ಟಿಪಿ ಕಡ್ಡಾಯವಾಗಿ ಸ್ಥಾಪಿಸುವ ಆದೇಶ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ತಡೆ ಹಿಡಿದಿರುವುದನ್ನು ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟ (ಬಿಎಎಫ್‌) ಸ್ವಾಗತಿಸಿದೆ. ಇದರಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.