ADVERTISEMENT

ಎಸ್‌ಐಟಿ ತನಿಖೆಗೆ ವಿರೋಧ

ಪ್ರಭಾವಿ ರಾಜಕಾರಣಿಗಳ ವಿರುದ್ಧದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕಾರಣಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾಯಿಸಬೇಕು ಎಂಬ ಕೋರಿಕೆಯನ್ನು ಸರ್ಕಾರ ವಿರೋಧಿಸಿದೆ. `ಲೋಕಾಯುಕ್ತ ಸಂಸ್ಥೆಯ ಕುರಿತು ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ' ಎಂದು ಸರ್ಕಾರ ಪ್ರತಿಪಾದಿಸಿದೆ.

ಎಲ್. ರಾಜಣ್ಣ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಂಗಳವಾರ ನಡೆಸಿತು. `ಕೆಲವು ಪ್ರಮುಖ ರಾಜಕಾರಣಿಗಳನ್ನು ಆರೋಪಿಗಳು ಎಂದು ಹೆಸರಿಸಿದ್ದ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿದ್ದಾರೆ. ಆದರೆ ಇದನ್ನು ದೂರುದಾರರೇ ಪ್ರಶ್ನಿಸಿಲ್ಲ, ಬಿ ವರದಿಯನ್ನು ಮೂರನೆಯ ವ್ಯಕ್ತಿ ಪ್ರಶ್ನಿಸುತ್ತಿರುವುದು ಹೇಗೆ?' ಎಂದು ಸರ್ಕಾರದ ಪರ ವಕೀಲರು ಅನುಮಾನ ವ್ಯಕ್ತಪಡಿಸಿದರು.

`17 ತಿಂಗಳ ಕಾಲ ಲೋಕಾಯುಕ್ತರನ್ನು ಸರ್ಕಾರ ನೇಮಕ ಮಾಡಿರಲಿಲ್ಲ. ಈ ಅವಧಿಯಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಕೆಯಾಗಿದೆ. ರಾಜಕಾರಣಿಗಳನ್ನು ಒಳಗೊಂಡ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ವರ್ಗಾಯಿಸಬೇಕು' ಎಂದು ಅರ್ಜಿದಾರರು ಕೋರಿದರು. ವಿಚಾರಣೆ ಮುಂದೂಡಲಾಗಿದೆ.

ಪಿಐಎಲ್ ದುರುಪಯೋಗ:
`ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೆಲವು ವಕೀಲರಿಂದ ದುರುಪಯೋಗ ಆಗುತ್ತಿವೆ. ಇದನ್ನು ತಡೆಯಲು ನಮಗೆ ಅಡ್ವೊಕೇಟ್ ಜನರಲ್ ಸಹಕಾರ ಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಂಗಳವಾರ ಮೌಖಿಕವಾಗಿ ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆ ವೇಳೆ ವಿಭಾಗೀಯ ಪೀಠ, `ಸರ್ಕಾರ ಕೈಗೊಳ್ಳುವ ಎಲ್ಲ ಆಡಳಿತಾತ್ಮಕ ನಿರ್ಧಾರಗಳನ್ನು ವಕೀಲರು ಪಿಐಎಲ್ ಹೆಸರಿನಲ್ಲಿ ಪ್ರಶ್ನಿಸುತ್ತ ಸಾಗಿದರೆ, ನಾವು ಎಲ್ಲಿಗೆ ಹೋಗಿ ತಲುಪುತ್ತೇವೆ?' ಎಂದು ಕಳವಳ ವ್ಯಕ್ತಪಡಿಸಿತು.
`ನಾಡಿನ ಯಾವುದೋ ಒಂದು ಭಾಗದಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪಿಸುತ್ತಾರೆ. ಅದನ್ನು ಪ್ರಶ್ನೆ ಮಾಡಿ ಬೆಂಗಳೂರಿನ ವಕೀಲರೊಬ್ಬರು ಪಿಐಎಲ್ ಸಲ್ಲಿಸುತ್ತಾರೆ. ಇವರಿಗೆ ಆ ವಿಚಾರದಲ್ಲಿರುವ ಹಿತಾಸಕ್ತಿ ಏನು?' ಎಂದು ಪೀಠ ಪ್ರಶ್ನಿಸಿತು.

ಬಾರ್‌ಗಳಲ್ಲಿ ಮಹಿಳೆಯರು: ವಿಚಾರಣೆ ಮುಂದಕ್ಕೆ
ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಬಾರ್ ಮತ್ತು ರೆಸ್ಟೊರೆಂಟ್‌ಗಳು ಪಾಲಿಸಬೇಕಾದ ನಿಯಮಗಳನ್ನು ಅಂತಿಮಗೊಳಿಸಲು ಸರ್ಕಾರ ಹೆಚ್ಚುವರಿ ಕಾಲಾವಕಾಶ ಕೋರಿದೆ. ಈ ಮೊದಲು ಸಲ್ಲಿಸಿದ್ದ ಹೇಳಿಕೆ ಅನ್ವಯ, ಸರ್ಕಾರ ನಿಯಮಗಳನ್ನು ರೂಪಿಸಿ ಹೈಕೋರ್ಟ್‌ಗೆ ಮಂಗಳವಾರ ಸಲ್ಲಿಸಬೇಕಿತ್ತು.

ಮಹಿಳೆಯರು ಕೆಲಸ ಮಾಡುವ ಬಾರ್‌ಗಳ ಮೇಲೆ ದಾಳಿ ನಡೆಸುವ ಪೊಲೀಸರು, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿಗೆ ಸರ್ಕಾರದ ಪರವಾಗಿ ಹೇಳಿಕೆ ಸಲ್ಲಿಸಿದ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, `ನಿಯಮಗಳು ಇನ್ನೂ ಕರಡು ರೂಪದಲ್ಲಿವೆ. ಅವುಗಳನ್ನು ಅಂತಿಮಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕು' ಎಂದು ಕೋರಿದರು. ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.