ADVERTISEMENT

ಏಕರೂಪ ಸಮಾನ ಶಿಕ್ಷಣ ನೀತಿಗೆ ಚಳವಳಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST

ಬೆಂಗಳೂರು: `ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಚಳವಳಿ ನಡೆಸಲಾಗುವುದು. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ನೀಡಿರುವ ಕ್ರಮದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಹೊಸ ರೂಪ ದೊರಕಲಿದೆ~ ಎಂದು ಕ.ಸಾ.ಪ. ಅಧ್ಯಕ್ಷ ಪುಂಡಲೀಕ ಹಾಲಂಬಿ ಘೋಷಿಸಿದರು.
 
ಜಯ ಕರ್ನಾಟಕ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಏಕರೂಪ ಸಮಾನ ಶಿಕ್ಷಣ ನೀತಿ ಕುರಿತ ವಿಚಾರಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿ, `ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿಲ್ಲ. ಶಿಕ್ಷಣದ ವ್ಯಾಪಾರೀಕರಣ ನಡೆದಿದೆ. ನೂರಾರು ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಕನ್ನಡ ಭಾಷೆ ಉಳಿಸಲು ಸಂಘಟಿತ ಹೋರಾಟ ನಡೆಯಬೇಕಿದೆ~ ಎಂದು ಅಭಿಪ್ರಾಯಪಟ್ಟರು.

ಲೇಖಕ ಜಿ.ರಾಮಕೃಷ್ಣ ವಿಚಾರಸಂಕಿರಣ ಉದ್ಘಾಟಿಸಿ, `ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಸುವ ಸರ್ಕಾರದ ನಿರ್ಧಾರದಿಂದ ಗೊಂದಲ ಹೆಚ್ಚಿದೆ. ಇದರಿಂದ ಆಗುವ ಪ್ರಯೋಜನದ ಬಗ್ಗೆ ಅಧ್ಯಯನ ಆಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಬೇಕಾದ ಸಿದ್ಧತೆ, ಹೊಸ ಉಪನ್ಯಾಸಕರ ನೇಮಕ, ಹೊಸ ಕೊಠಡಿಗಳ ನಿರ್ಮಾಣ ಆಗಿದೆಯಾ~ ಎಂದು ಪ್ರಶ್ನಿಸಿದರು.

`ಏಕರೂಪದ ಸಮಾನ ಶಿಕ್ಷಣ ನೀಡಬೇಕು ಹಾಗೂ ಶಾಲೆಗಳ ಗುಣಮಟ್ಟ ಸಂರಕ್ಷಣೆ ಮಾಡಬೇಕು ಎಂದು ಕೊಠಾರಿ ಆಯೋಗ 1966ರಲ್ಲೇ ಶಿಫಾರಸು ಮಾಡಿತ್ತು. ಶಾಲೆಗಳಲ್ಲಿ ಸಾಮಾಜಿಕ ಪ್ರತ್ಯೇಕತೆಯ ಭಾವನೆ ಮೂಡದಂತೆ ಎಚ್ಚರ ವಹಿಸಬೇಕು ಎಂದು ಆಯೋಗ ಸೂಚಿಸಿತ್ತು.
 
ಈ ವರೆಗೆ ಆಯೋಗದ ಶಿಫಾರಸು ಜಾರಿಗೆ ಬಂದಿಲ್ಲ. ಆಂಗ್ಲ ಮಾಧ್ಯಮ ಶಿಕ್ಷಣ ಪ್ರಪಂಚ ನೋಡುವುದನ್ನು, ಸಂವಹನ ನಡೆಸುವುದನ್ನು, ಪ್ರಕೃತಿಯ ವಿಸ್ಮಯ ಅನುಭವಿಸುವುದನ್ನು ಕಲಿಸುವುದಿಲ್ಲ. ಹೊಸ ಆವಿಷ್ಕಾರಕ್ಕೆ ಇಲ್ಲಿ ಅವಕಾಶ ಇಲ್ಲ. ಇಂಗ್ಲಿಷ್‌ನಲ್ಲಿ ನಾಲ್ಕು ಅಕ್ಷರ ಮಾತನಾಡುವುದೇ ಶ್ರೇಷ್ಠ ಎಂದು ಭಾವಿಸಲಾಗುತ್ತಿದೆ. ಆಂಗ್ಲಮಾಧ್ಯಮ ಶಿಕ್ಷಣದಲ್ಲೂ ಅಸಮಾನತೆ ಇದೆ. ಅಲ್ಲಿ ಶ್ರೀಮಂತರ, ಬಡವರ, ಕೊಳಚೆ ಪ್ರದೇಶದ ಮಕ್ಕಳ ಶಾಲೆಗಳು ಇವೆ~ ಎಂದರು.

ಸಾಹಿತಿ ಡಾ. ಚಂದ್ರಶೇಖರ ಪಾಟೀಲ, `ಸಾವಿರಾರು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುತ್ತೇವೆ ಎಂದು ಬರೆದುಕೊಟ್ಟು ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿವೆ. ಈ ಬಗ್ಗೆ ನೀಡಿರುವ ವರದಿಯನ್ನು ಸರ್ಕಾರ ಮಾನ್ಯ ಮಾಡಿಲ್ಲ. ಸಾಹಿತಿಗಳ ವಿರುದ್ಧ ಹೇಳಿಕೆ ನೀಡುವ ಬದಲು ಶಾಸಕರು, ಮಠಾಧೀಶರು, ಬಂಡವಾಳಶಾಹಿಗಳು ಎಷ್ಟು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದ್ದಾರೆ ಎಂಬುದನ್ನು ಸರ್ಕಾರ ಪತ್ತೆ ಹಚ್ಚಲಿ~ ಎಂದು ಆಗ್ರಹಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್, ಬೆಂಗಳೂರು ಘಟಕದ ಅಧ್ಯಕ್ಷ ಆರ್. ಚಂದ್ರಪ್ಪ ಉಪಸ್ಥಿತರಿದ್ದರು.

  `ಬಹುಪಾಲು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪರಿಣಿತ ಶಿಕ್ಷಕರು ಇಲ್ಲ. ಅಲ್ಲಿ ವೈಜ್ಞಾನಿಕ ಪಠ್ಯಕ್ರಮ ಇಲ್ಲ. ಖಾಸಗಿ ಶಾಲೆಗಳಲ್ಲಿ ದೊಡ್ಡ ಕಟ್ಟಡಗಳು, ಚೆಂದದ ಆವರಣ ಗೋಡೆ ಇರುತ್ತದೆ.  ಕನ್ನಡ ಶಾಲೆಗಳ ಶಿಕ್ಷಕರು ತುಂಬಾ ಪ್ರತಿಭಾವಂತರು. ಸರ್ಕಾರಿ ಶಾಲೆಗಳನ್ನು ಅನಾಥಾಶ್ರಮದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಶಾಲೆಗಳಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಇದು ದೊಡ್ಡ ಆತ್ಮ ವಂಚನೆ~. 

  `ಇಂಗ್ಲಿಷ್ ಕಲಿತರೆ ಮಾತ್ರ ಉದ್ಧಾರವಾಗಲು ಸಾಧ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಮಂದಿ ಜನರು ಇಂಗ್ಲಿಷ್ ಪರ ಧೋರಣೆ ತಾಳಲಾರಂಭಿಸಿದ್ದಾರೆ. ರೈತರು ಕೃಷಿ ಭೂಮಿ ಮಾರಿ ಅಥವಾ ಅಡವಿಟ್ಟು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆಂಗ್ಲ ಶಿಕ್ಷಣ ಪಡೆದ ಡ್ರೈವರ್ ಮಗ ಇಂಗ್ಲಿಷ್ ಮಾತನಾಡುವ ಡ್ರೈವರ್ ಆಗಿದ್ದಾನೆ. ಒಳ್ಳೆಯ ಶಿಕ್ಷಣದ ಆಸೆಯಲ್ಲಿ ಖಾಸಗಿ ಶಾಲೆಗೆ ಸೇರಿ ಕಳಪೆಕಳಪೆ ಶಿಕ್ಷಣ ಪಡೆದುದರ ಪರಿಣಾಮ ಇದು.~
                             -ಡಾ. ಬಂಜಗೆರೆ ಜಯಪ್ರಕಾಶ್, ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT