ADVERTISEMENT

ಏಕ ಗವಾಕ್ಷಿ ಪದ್ಧತಿ: ಶೀಘ್ರವೇ ಸಭೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಬೆಂಗಳೂರು: ಕನ್ನಡ ಸಿನಿಮಾಗಳ ಚಿತ್ರೀಕರಣ ಶೇ 50ರಷ್ಟು ಕರ್ನಾಟಕದಲ್ಲಿಯೇ ನಡೆಯುವುದಕ್ಕಾಗಿ ಜಾರಿಗೆ ತಂದಿರುವ `ಏಕ ಗವಾಕ್ಷಿ~ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಂಬಂಧ ಇನ್ನು 15 ದಿನಗಳೊಳಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಚಿತ್ರರಂಗದ ಪ್ರಮುಖರ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಜಗ್ಗೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಒಂದೇ ಕಡೆ ಹಣ ಪಾವತಿಸಿ, ಚಿತ್ರೀಕರಣಕ್ಕೆ ಅನುಮತಿ ಕೊಡಿಸಲು ಚಿತ್ರೋದ್ಯಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು~ ಎಂದು ಭರವಸೆ ನೀಡಿದರು.

ಕರ್ನಾಟಕದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನೇಕ ಸುಂದರ ತಾಣಗಳಿವೆ. ಆದರೆ, ಇಂತಹ ಸುಂದರ ತಾಣಗಳಲ್ಲಿ ಚಿತ್ರೀಕರಣಕ್ಕೆ ದುಬಾರಿ ದರ ವಿಧಿಸಲಾಗುತ್ತಿದೆ. ಇದರಿಂದ ಬಹಳಷ್ಟು ತಾಣಗಳಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದೇ ಕಡೆ ಹಣ ಪಾವತಿಸಿ ಚಿತ್ರೀಕರಣಕ್ಕೆ ಅನುಮತಿ ನೀಡುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜಗ್ಗೇಶ್ ಒತ್ತಾಯಿಸಿದರು.

ಜೆಡಿಎಸ್‌ನ ಸಂದೇಶ್ ನಾಗರಾಜ್, ಬಿಜೆಪಿಯ ಶ್ರೀನಾಥ್, ದೊಡ್ಡರಂಗೇಗೌಡ ಅವರು ಜಗ್ಗೇಶ್ ಒತ್ತಾಯಕ್ಕೆ ದನಿಗೂಡಿಸಿದರು.

ಗ್ರಂಥಾಲಯ ಸೆಸ್ ಬಿಡುಗಡೆ
ಕಳೆದ ಮೂರು ವರ್ಷಗಳಿಂದ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಬಾಕಿ ಉಳಿಸಿಕೊಂಡಿರುವ 36 ಕೋಟಿ ರೂಪಾಯಿ `ಗ್ರಂಥಾಲಯ ಸೆಸ್~ ಅನ್ನು ಈ ಆರ್ಥಿಕ ವರ್ಷದ ಅಂತ್ಯದೊಳಗೆ ಗ್ರಂಥಾಲಯ ಪ್ರಾಧಿಕಾರಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮನೋಹರ ಮಸ್ಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 151 ಕೋಟಿ ರೂಪಾಯಿಗಳಲ್ಲಿ 115 ಕೋಟಿ ರೂಪಾಯಿಗಳನ್ನು ಗ್ರಂಥಾಲಯ ಪ್ರಾಧಿಕಾರಕ್ಕೆ ನೀಡಲಾಗಿದೆ. ಇನ್ನುಳಿದ 36 ಕೋಟಿ ರೂಪಾಯಿಗಳನ್ನು ಮಾರ್ಚ್ ಅಂತ್ಯದೊಳಗೆ ನೀಡಲಾಗುವುದು ಎಂದರು.

ಬಿಬಿಎಂಪಿಯು 30 ಕೋಟಿ, ಬಳ್ಳಾರಿ 1.08 ಕೋಟಿ, ಮೈಸೂರು 3.80 ಕೋಟಿ, ದಾವಣಗೆರೆ 34.16 ಲಕ್ಷ, ಬೆಳಗಾವಿ ಮಹಾನಗರ ಪಾಲಿಕೆ 46.17 ಲಕ್ಷ ರೂಪಾಯಿ ಗ್ರಂಥಾಲಯ ಸೆಸ್ ಬಾಕಿ ಉಳಿಸಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.