ADVERTISEMENT

‘ಐ–ಫೋನ್’ ಎಂದು ಗಾಜಿನ ತುಣಕು ನೀಡಿ ವಂಚನೆ!

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:45 IST
Last Updated 7 ಮೇ 2018, 19:45 IST

ಬೆಂಗಳೂರು: ‘ಐ–ಫೋನ್’ ಎಂದು ಹೇಳಿ ಗಾಜಿನ ತುಣುಕು ನೀಡಿದ್ದ ಅಪರಿಚಿತರಿಬ್ಬರು, ರೋಶನ್‌ ಎಂಬುವರಿಂದ ₹23,500 ಪಡೆದುಕೊಂಡು ವಂಚಿಸಿದ್ದಾರೆ.

ಈ ಸಂಬಂಧ ಕಸವನಹಳ್ಳಿ ನಿವಾಸಿ ರೋಶನ್, ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ.

‘ಮೇ 1ರಂದು ಸಂಜೆ 4.30 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಸರ್ಜಾಪುರ ರಸ್ತೆಯ ವಿಪ್ರೊ ಕಂಪನಿ ಬಳಿಯ ರಸ್ತೆ ಮೂಲಕ ಮನೆಗೆ ಹೊರಟಿದ್ದೆ. ಅದೇ ವೇಳೆ ನನ್ನನ್ನು ಮಾತನಾಡಿಸಿದ್ದ ಅಪರಿಚಿತನೊಬ್ಬ, ತನ್ನ ಬಳಿ ಆ್ಯಪಲ್ ಐ–ಫೋನ್ 8 ಪ್ಲಸ್‌ ಇರುವುದಾಗಿ ಹೇಳಿದ್ದ. ಅದರ ಬಿಲ್‌ ಸಹ ತೋರಿಸಿದ್ದ’ ಎಂದು ದೂರಿನಲ್ಲಿ ರೋಶನ್ ತಿಳಿಸಿದ್ದಾರೆ.

ADVERTISEMENT

‘ಹಣದ ಅವಶ್ಯಕತೆ ಇರುವುದಾಗಿ ಹೇಳಿದ್ದ ಆತ, ₹25,000 ಕೊಟ್ಟರೆ ಮೊಬೈಲ್‌ ಮಾರುವುದಾಗಿ ಹೇಳಿದ್ದ. ಚೌಕಾಶಿ ಮಾಡಿ ₹23,500 ಕೊಡಲು ಒಪ್ಪಿಕೊಂಡಿದ್ದೆ. ಹತ್ತಿರದಲ್ಲೇ ಇದ್ದ ಎಟಿಎಂ ಘಟಕಕ್ಕೆ ಹೋಗಿ ಹಣ ಡ್ರಾ ಮಾಡಿಕೊಂಡು ಬಂದು ಆ ವ್ಯಕ್ತಿಗೆ ಕೊಟ್ಟಿದ್ದೆ. ಹಣ ಎಣಿಸಿಕೊಂಡ ನಂತರ, ಆತನ ಜತೆಗಿದ್ದ ಇನ್ನೊಬ್ಬ ವ್ಯಕ್ತಿ ಮೊಬೈಲ್‌ ಬಾಕ್ಸ್‌ನ್ನು ನನಗೆ ಕೊಟ್ಟಿದ್ದ. ಬಳಿಕ, ಅವರಿಬ್ಬರು ಸ್ಥಳದಿಂದ ಹೊರಟುಹೋಗಿದ್ದರು’.

‘ನಂತರ, ಬಾಕ್ಸ್‌ ತೆರೆದು ನೋಡಿದಾಗ ಅದರಲ್ಲಿ ಗಾಜಿನ ತುಣುಕುಗಳು ಇರುವುದು ಗೊತ್ತಾಯಿತು. ಆರೋಪಿಗಳ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಆಗಿತ್ತು’ ಎಂದಿದ್ದಾರೆ.

ಮಹಿಳೆಯನ್ನು ಮಂಚಕ್ಕೆ ಕರೆದವನ ಬಂಧನ
ಬೆಂಗಳೂರು: ಮಹಿಳೆಯೊಬ್ಬರ ಮೊಬೈಲ್‌ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಆರೋಪದಡಿ ರಮಣ ಎಂಬಾತನನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿ.ಕೆ.ನಗರನ 1ನೇ ಮುಖ್ಯರಸ್ತೆಯ ನಿವಾಸಿಯಾದ ಆತ, ಕೂಲಿ ಕಾರ್ಮಿಕ. ಆತನ ಮನೆಯ ಬಳಿಯೇ 44 ವರ್ಷದ ಮಹಿಳೆ ವಾಸವಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನೀಡಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಿದ್ದೇವೆ. ಆತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಗೆ ಏಪ್ರಿಲ್ 30ರಂದು ಮಧ್ಯಾಹ್ನ ಕರೆ ಮಾಡಿದ್ದ ಆರೋಪಿ, ‘ನೀನು ಚೆನ್ನಾಗಿದ್ದಿಯಾ. ನನ್ನ ಜತೆ ಒಂದು ರಾತ್ರಿ ಮಲಗುವೆಯಾ’ ಎಂದು ಕೇಳಿದ್ದ. ಅದರಿಂದ ಕೋಪಗೊಂಡಿದ್ದ ಸಂತ್ರಸ್ತೆ, ತರಾಟೆಗೆ ತೆಗದುಕೊಂಡು ಕರೆ ಕಡಿತಗೊಳಿಸಿದ್ದರು. ಅದಾದ ನಂತರವೂ ಆತ ಪದೇ ಪದೇ ಕರೆ ಮಾಡಿ ಕಿರುಕುಳ ನೀಡಲಾರಂಭಿಸಿದ್ದ’

‘ಮೇ 1ರಂದು ಮಧ್ಯಾಹ್ನ ಪುನಃ ಕರೆ ಮಾಡಿದ್ದ ಆರೋಪಿ, ‘ನೀನು ನನ್ನ ಜತೆ ಮಲಗಿದರೆ ₹2 ಲಕ್ಷ ಕೊಡುತ್ತೇನೆ. ಈಗಲೇ ರಾಜರಾಜೇಶ್ವರಿ ಶಾಲೆ ಬಳಿ ಬಾ. ನಿನಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದ. ಆತನ ಕಾಟದಿಂದ ಬೇಸತ್ತಿದ್ದ ಸಂತ್ರಸ್ತೆ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ನಂತರ, ಸಂಬಂಧಿಕರೇ ಮಹಿಳೆಯನ್ನು ಕರೆದುಕೊಂಡು ಶಾಲೆ ಬಳಿ ಹೋಗಿದ್ದರು. ಮಹಿಳೆಯನ್ನಷ್ಟೇಮೈದಾನದಲ್ಲಿ ಒಬ್ಬಂಟಿಯಾಗಿ ನಿಲ್ಲಿಸಿದ್ದರು.’

‘ಮೈದಾನಕ್ಕೆ ಬಂದಿದ್ದ ಆರೋಪಿ, ‘ನಾನು ನಿಮ್ಮ ಮನೆ ಬಳಿಯೇ ವಾಸವಿದ್ದೇನೆ. ನಾನೇ ಕರೆ ಮಾಡಿದ್ದು’ ಎಂದಿದ್ದ. ಅದೇ ವೇಳೆ ಸ್ಥಳಕ್ಕೆ ಹೋದ ಸಂಬಂಧಿಕರು, ಆತನನ್ನು ಹಿಡಿದು ಥಳಿಸಿದ್ದರು. ನಂತರ ಆತನನ್ನು ಠಾಣೆಗೆ ತಂದು ಒಪ್ಪಿಸಿದರು’ ಎಂದರು.

‘ಆರೋಪಿಯು ಸ್ನೇಹಿತನೊಬ್ಬನಿಂದ ಮಹಿಳೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಅಂದಿನಿಂದಲೇ ನಿರಂತರವಾಗಿ ಕರೆ ಮಾಡಲಾರಂಭಿಸಿದ್ದ’
ಎಂದರು.

ಮಾಜಿ ಮೇಯರ್‌ಗೆ ಜೈಲು

ಮೈಸೂರು: ಸಹಿ ನಕಲು ಮಾಡಿ ಹಣ ಡ್ರಾ ಮಾಡಿದ್ದ ಮಾಜಿ ಮೇಯರ್‌ ಆರ್‌.ಜಿ.ನರಸಿಂಹ ಅಯ್ಯಂಗಾರ್‌ ಅವರಿಗೆ 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ಒಂದು ವರ್ಷ ಜೈಲುಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.ಸಂತ್ರಸ್ತೆ ಎಂ.ಬಿ.ಪಾರ್ವತಿ ಬಿಡ್ಡಪ್ಪ ಅವರಿಗೆ ನೀಡಬೇಕಿದ್ದ ₹ 84,336 ಸಾವಿರವನ್ನು ಹಿಂದಿರುಗಿಸುವಂತೆ ನರಸಿಂಹ ಅವರಿಗೆ ನ್ಯಾಯಾಧೀಶ ಯಶವಂತಕುಮಾರ್‌ ಆದೇಶಿಸಿದ್ದಾರೆ.

ಪ್ರಕರಣವೊಂದರ ಸಂಬಂಧ ಅಲಹಾಬಾದ್‌ ಬ್ಯಾಂಕ್‌ ಪಾರ್ವತಿ ಹೆಸರಿಗೆ ಒಟ್ಟು ₹ 84,336 ಮೊತ್ತದ ಎರಡು ಚೆಕ್‌ಗಳನ್ನು ನೀಡುವಂತೆ ನ್ಯಾಯಾಲಯವು ಆದೇಶ ನೀಡಿತ್ತು. ಬ್ಯಾಂಕಿನವರು ಚೆಕ್‌ಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಆದರೆ, ಪಾರ್ವತಿ ಪರ ವಕಾಲತ್ತು ವಹಿಸಿದ್ದ ನರಸಿಂಹ ಅವರು, ಆ ಎರಡು ಚೆಕ್‌ಗಳನ್ನು ಪಡೆದುಕೊಂಡಿದ್ದರು. ಪಾರ್ವತಿ ಅವರಿಗೆ ಹಣವನ್ನು ಪಾವತಿ ಮಾಡಿರುವುದಾಗಿ ಚೆಕ್‌ ಹಿಂದೆ ಹಿಂಬರಹ ಬರೆದು, ಅವರ ಸಹಿಯನ್ನು ಮಾಡಿ ತಮ್ಮ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

‘ನಾನು ಯಾವುದೇ ಸಹಿ ಮಾಡಿಲ್ಲ. ಆದರೆ, ನರಸಿಂಹ ಅವರು ನನ್ನ ಸಹಿಯನ್ನು ನಕಲು ಮಾಡಿ ಹಣ ಡ್ರಾ ಮಾಡಿದ್ದಾರೆ’ ಎಂದು ಆರೋಪಿಸಿ ಪಾರ್ವತಿ ಅವರು 2008ರಲ್ಲಿ 1ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಬಗ್ಗೆ ತನಿಖೆ ನಡೆಸುವಂತೆ ಕೆ.ಆರ್‌.ಠಾಣೆ ಪೊಲೀಸರಿಗೆ ಆದೇಶಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಚೆಕ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಚೆಕ್‌ಗಳ ಮೇಲೆ ಮಾಡಿರುವ ಸಹಿಯು ನಕಲಿ ಎಂಬುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಪೊಲೀಸರು ನರಸಿಂಹ ವಿರುದ್ಧ 2009ರಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ತಪ್ಪಿಸಿಕೊಂಡಿದ್ದ ಬಾಲಕ ಪೋಷಕರ ಮಡಿಲಿಗೆ

ಬೆಂಗಳೂರು: ಪೋಷಕರಿಂದ ತಪ್ಪಿಸಿಕೊಂಡು ರಸ್ತೆಯಲ್ಲೆಲ್ಲ ಓಡಾಡುತ್ತಿದ್ದ ಚಿರು ಎಂಬ 18 ತಿಂಗಳ ಬಾಲಕನನ್ನು ಮಡಿವಾಳ ಸಂಚಾರ ಠಾಣೆಯ ಕಾನ್‌ಸ್ಟೆಬಲ್‌ ಆರ್.ಲೋಕೇಶ್‌, ಹೆತ್ತವರ ಮಡಿಲು ಸೇರುವಂತೆ ಮಾಡಿದ್ದಾರೆ.

ಬಾಲಕನ ಪೋಷಕರು ಲಕ್ಷ್ಮಿ ಬಡಾವಣೆಯಲ್ಲಿ ವಾಸವಿದ್ದಾರೆ. 30ಕ್ಕೂ ಹೆಚ್ಚು ಮಂದಿ ಚುನಾವಣಾ ಪ್ರಚಾರಕ್ಕಾಗಿ ಮೇ 1ರಂದು ಬಡಾವಣೆಗೆ ಹೋಗಿದ್ದರು. ಬಾಲಕ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದ.

ಹೊಸೂರು ರಸ್ತೆಯ ಗಾರ್ವೆಪಾಳ್ಯ ಸಿಗ್ನಲ್‌ ಬಳಿ ಬಂದು ಕಾರ್ಯಕರ್ತರೆಲ್ಲ ಚದುರಿ ಹೋಗಿದ್ದರು. ಯಾವ ಕಡೆ ಹೋಗುವುದು ಎಂದು ತಿಳಿಯದೆ ಬಾಲಕ ಅಲ್ಲಿಯೇ ಅಳುತ್ತ ನಿಂತಿದ್ದ. ಸಿಗ್ನಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್, ಬಾಲಕನನ್ನು ವಿಚಾರಿಸಿದ್ದರು. ಆತನಿಗೆ ಮಾತು ಬಾರದಿದ್ದರಿಂದ ವಿಳಾಸ ಹೇಳಿರಲಿಲ್ಲ. ನಂತರ, ಬಾಲಕನನ್ನು ತಮ್ಮ ಬೈಕ್‌ನಲ್ಲಿ ಹತ್ತಿಸಿಕೊಂಡು ಮಡಿವಾಳ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಸುತ್ತಾಡಿಸಿದ್ದರು. ಬಾಲಕ ತನ್ನ ಮನೆಯನ್ನು ಗುರುತಿಸಿರಲಿಲ್ಲ.

ವಾಪಸ್‌ ಸಿಗ್ನಲ್‌ ಬಳಿ ಬಂದಿದ್ದ ಲೋಕೇಶ್‌, ಬಾಲಕನ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಅದನ್ನು ನೋಡಿದ ಪೋಷಕರು, ಮೇ 1ರಂದು ಸಂಜೆ ಸಿಗ್ನಲ್‌ ಬಳಿ ಹೋಗಿ ಬಾಲಕನನ್ನು ಕರೆದೊಯ್ದರು. ಕಾನ್‌ಸ್ಟೆಬಲ್‌ ಅವರ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಿದರು.

‘ತಾನು ತಪ್ಪಿಸಿಕೊಂಡಿದ್ದೇನೆ ಎಂಬ ಅರಿವು ಬಾಲಕನಿಗೆ ಇರಲಿಲ್ಲ. ಬೈಕ್‌ನಲ್ಲಿ ಸುತ್ತಾಡಿಸುತ್ತಿದ್ದ ವೇಳೆ ನಗುತ್ತಲೇ ಇದ್ದ. ಆತನನ್ನು ವಾಪಸ್‌ ಪೋಷಕರ ಮಡಿಲು ಸೇರಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.