ADVERTISEMENT

ಐಬಿಸಿ ನಾಲೆಜ್‌ ಪಾರ್ಕ್‌: ಹೈಕೋರ್ಟ್‌ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 20:02 IST
Last Updated 4 ಡಿಸೆಂಬರ್ 2013, 20:02 IST

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಐಬಿಸಿ ನಾಲೆಜ್‌ ಪಾರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ‘ಸಿ’ ಮತ್ತು ‘ಡಿ’ ಸಮುಚ್ಚಯಗಳಿಗೆ ಬೃಹತ್‌ ಬೆಂಗಳೂರು ಮಹಾ­ನಗರ ಪಾಲಿಕೆಯು (ಬಿಬಿಎಂಪಿ) ಆಂಶಿಕ ಸ್ವಾಧೀನ ಪತ್ರ (ಪಿಒಸಿ) ನೀಡಿದ ಕ್ರಮ ಪಾಲಿಕೆಯ ಕಟ್ಟಡ ನಿರ್ಮಾಣ ಉಪ­ನಿಯಮ­ಗಳಿಗೆ ವಿರುದ್ಧ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ಬುಧವಾರ ತಡೆಯಾಜ್ಞೆ ನೀಡಿದೆ.

‘ಬೆಂಗಳೂರು ಗೃಹ ಅಭಿವೃದ್ಧಿ ಮತ್ತು ಬಂಡವಾಳ’ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ‘ಪೂರ್ಣ ಪ್ರಮಾಣದ ಸ್ವಾಧೀನ ಪತ್ರ ಪಡೆದುಕೊಳ್ಳುವ ಮುನ್ನವೇ ಕೆಲವು ಖಾಸಗಿ ಕಂಪೆನಿಗಳಿಗೆ ಈ ಸಮುಚ್ಚಯಗಳಲ್ಲಿ ಕಚೇರಿ ಆರಂಭಿಸಲು ಐಬಿಸಿ ಕಂಪೆನಿ ಅನುಮತಿ ನೀಡಿತ್ತು. ಈ ಕಂಪೆನಿಗಳಿಂದ ಬಾಡಿಗೆ ಪಡೆದುಕೊಳ್ಳುವ ಅಧಿಕಾರ ಐಬಿಸಿಗೆ ಇಲ್ಲ. ಹಾಗಾಗಿ ಐಬಿಸಿ ಕಂಪೆನಿಯು ಪಾಲಿಕೆಗೆ ಮಾಸಿಕ ₨ 2.35 ಕೋಟಿ ಬಾಡಿಗೆ ನೀಡಬೇಕು’ ಎಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಐಬಿಸಿ ನಾಲೆಜ್‌ ಪಾರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಮೇಲ್ಮನವಿ ಸಲ್ಲಿಸಿದೆ. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್‌.ವಘೇಲಾ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.