ADVERTISEMENT

ಒಂದಕ್ಕಿಂತ ಹೆಚ್ಚು ಬಾರಿ ತ್ಯಾಜ್ಯ ಸಾಗಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿರುವವರಿಗೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಬಾರಿ ನಗರದಿಂದ ತ್ಯಾಜ್ಯ ಸಾಗಿಸಲು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶನ ನೀಡಿದೆ.

ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ, `ಪ್ರತಿ ಪ್ಯಾಕೇಜ್ ಕಸಕ್ಕೆ ನಿಗದಿ ಮಾಡಿರುವ ಟ್ರಕ್‌ಗಳಿಗೆ ದಿನನಿತ್ಯ ಒಂದಕ್ಕಿಂತ ಹೆಚ್ಚು ಬಾರಿ ತ್ಯಾಜ್ಯ ಸಾಗಿಸಲು ಅವಕಾಶ ನೀಡಿ~ ಎಂದು ಮಂಗಳವಾರ ನಿರ್ದೇಶನ ನೀಡಿತು.

`ರಾತ್ರಿ 10ರಿಂದ ಬೆಳಿಗ್ಗೆ 6ರ ನಡುವಿನ ಅವಧಿಯಲ್ಲಿ ಮಾತ್ರ ನಗರದಿಂದ ತ್ಯಾಜ್ಯವನ್ನು ಸಾಗಿಸಲು ಬಿಬಿಎಂಪಿ ಅನುಮತಿ ನೀಡಿದೆ. ಒಂದು ಟ್ರಕ್ ಬಳಸಿ ಒಂದು ಬಾರಿ ಮಾತ್ರ ಸಾಗಿಸಬಹುದು ಎಂಬ ನಿಯಮವೂ ಇದೆ. ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ ಹಾಗೂ ಇಲ್ಲಿಂದ ಹೊರಗೆ ಸಾಗಿಸಲಾಗುತ್ತಿರುವ ತ್ಯಾಜ್ಯದ ಪ್ರಮಾಣದಲ್ಲಿ ವ್ಯತ್ಯಾಸ ಇದೆ. ಒಂದಕ್ಕಿಂತ ಹೆಚ್ಚು ಬಾರಿ ತ್ಯಾಜ್ಯ ಸಾಗಿಸಲು ಅವಕಾಶ ನೀಡಿದರೆ ಒಂದೆರಡು ದಿನಗಳಲ್ಲಿ ನಗರವನ್ನು ಕಸದಿಂದ ಮುಕ್ತಗೊಳಿಸಲು ಸಾಧ್ಯ~ ಎಂದು  ಗುತ್ತಿಗೆದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

`ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅನುಮತಿ ನೀಡಬಹುದಲ್ಲವೇ?~ ಎಂದು ಬಿಬಿಎಂಪಿ ಪರ ವಕೀಲ ಅಶೋಕ ಹಾರನಹಳ್ಳಿ ಅವರನ್ನು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿತು. `ತ್ಯಾಜ್ಯವನ್ನು ನಗರದಿಂದ ಹೊರಕ್ಕೆ ಸಾಗಿಸಲು ಅಗತ್ಯ ಸಂಖ್ಯೆಯ ಸಿಬ್ಬಂದಿ ಇದ್ದಾರೆ. ಒಂದು ಟ್ರಕ್‌ಗೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡಿ~ ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ವಿಚಾರಣೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT