ADVERTISEMENT

`ಒಗ್ಗಟ್ಟಿನಿಂದ ಬದುಕುವುದೇ ಸ್ವರಾಜ್ಯ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST
ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ನಡೆದ `ಡಬ್ಲ್ಯೂ.ಎಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ' ಕಾರ್ಯಕ್ರಮದಲ್ಲಿ ವೂಡೇ ಪ್ರತಿಷ್ಠಾನದ ಡಬ್ಲ್ಯೂ.ಎಚ್. ದೇವಕುಮಾರ್ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ ಅವರು ಪರಸ್ಪರ ಸಮಾಲೋಚನೆಯಲ್ಲಿ ತೊಡಗಿರುವುದು. ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಹೋ.ಶ್ರೀನಿವಾಸಯ್ಯ ಚಿತ್ರದಲ್ಲಿದ್ದಾರೆ
ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ನಡೆದ `ಡಬ್ಲ್ಯೂ.ಎಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ' ಕಾರ್ಯಕ್ರಮದಲ್ಲಿ ವೂಡೇ ಪ್ರತಿಷ್ಠಾನದ ಡಬ್ಲ್ಯೂ.ಎಚ್. ದೇವಕುಮಾರ್ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ ಅವರು ಪರಸ್ಪರ ಸಮಾಲೋಚನೆಯಲ್ಲಿ ತೊಡಗಿರುವುದು. ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಹೋ.ಶ್ರೀನಿವಾಸಯ್ಯ ಚಿತ್ರದಲ್ಲಿದ್ದಾರೆ   

ಬೆಂಗಳೂರು: `ಎಲ್ಲರೂ ಒಟ್ಟಿಗೆ ಸಹಕಾರದಿಂದ ನಮ್ಮ ಎಲ್ಲ ಕೆಲಸವನ್ನು ಒಟ್ಟಾಗಿ ಮಾಡಿಕೊಂಡು ಬದುಕುವುದೇ ಸ್ವರಾಜ್ಯವಾಗಿದೆ' ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ ಹೇಳಿದರು.

ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ವೂಡೇ ಪ್ರತಿಷ್ಠಾನದ ಸಹಯೋಗದೊಂದಿಗೆ ನಗರದಲ್ಲಿ ಸೋಮವಾರ ನಡೆದ `ಡಬ್ಲ್ಯೂ.ಎಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ' ಕಾರ್ಯಕ್ರಮದಲ್ಲಿ `ನಿಜವಾದ ಪ್ರಜಾಪ್ರಭುತ್ವ ಮತ್ತು ಗ್ರಾಮ ಸ್ವರಾಜ' ಕುರಿತು ಉಪನ್ಯಾಸ ನೀಡಿದರು.

`ಮೊದಲಿನ ನಮ್ಮ ಗ್ರಾಮ ಸ್ವರಾಜ್ ಕಲ್ಪನೆಯು ಉತ್ತಮವಾಗಿತ್ತು. ಅಲ್ಲಿ ತಮ್ಮ ಹಳ್ಳಿಯ ಎಲ್ಲ ಕೆಲಸವನ್ನು ಎಲ್ಲರೂ ಒಟ್ಟಾಗಿ ಬೆರೆತು ಮಾಡುತ್ತಿದ್ದರು. ಅಲ್ಲಿ ಯಾವುದೇ ಕಾನೂನು, ಪೊಲೀಸರಾಗಲೀ ಇರಲಿಲ್ಲ. ಆದರೆ, ಅಲ್ಲಿ ಹಿರಿಯರ ಮಾರ್ಗದರ್ಶನವಿತ್ತು. ಅವರು ಯಾವುದು ನ್ಯಾಯ, ನೀತಿ ಮತ್ತು ಯಾವುದು ಅನ್ಯಾಯ ಎಂಬುದನ್ನು ನಿರ್ಧರಿಸುತ್ತಿದ್ದರು. ನಮ್ಮದು ಅಂತಹ ಗ್ರಾಮ ಸ್ವರಾಜ್ ಪರಿಕಲ್ಪನೆಯಾಗಿತ್ತು' ಎಂದರು.

`ಗಾಂಧೀಜಿ ಅವರ ಕಲ್ಪನೆಯಂತೆ ಮಹಿಳೆಯು ರಾತ್ರಿ 12 ಗಂಟೆಗೆ ಮನೆಗೆ ಸುರಕ್ಷಿತವಾಗಿ ತಲುಪಿದರೆ, ಅದು ಸ್ವಾತಂತ್ರ್ಯ ಎಂಬುದು. ಆದರೆ, ಈಗ ನಮ್ಮ ದೇಶದ ರಾಜಧಾನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಓಡಾಡಲು ಕಷ್ಟವಾಗುತ್ತಿದೆ. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಒಂದು ನಿಮಿತ್ತ ಮಾತ್ರ. ಆದರೆ, ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೆ, ಮುಚ್ಚಿ ಹೋಗುತ್ತಿವೆ' ಎಂದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧೀ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ ಮಾತನಾಡಿ, `ಮಕ್ಕಳಿಗೆ ನಾವು ದ್ವೇಷಿಸುವುದನ್ನು ಕಲಿಸುತ್ತಿದ್ದೇವೆ. ಪ್ರೀತಿಸುವುದನ್ನು ಅಲ್ಲ. ಶಿಕ್ಷಣ ವಿದ್ಯಾಭ್ಯಾಸ ಮಾತ್ರವಾಗಿದೆ.  ಜೀವನ  ಪಾಠ  ಕಲಿಸುವುದಿಲ್ಲ' ಎಂದರು.

ಹುಬ್ಬಳ್ಳಿಯಲ್ಲಿ ಗಾಂಧಿ ಕಲಾಗ್ರಾಮ
`ಹುಬ್ಬಳ್ಳಿಯಲ್ಲಿ 70 ಎಕರೆ ಭೂಮಿಯಲ್ಲಿ ಗಾಂಧಿ ಕಲಾಗ್ರಾಮ ನಿರ್ಮಾಣ ಮಾಡಲಾಗುವುದು. ಸರ್ಕಾರ ಈ ಯೋಜನೆಗೆ 200 ಕೋಟಿ ರೂ ಬಿಡುಗಡೆ ಮಾಡಿದೆ. ಗಾಂಧೀಜಿ ಅವರ ಸಾಬರಮತಿ ಆಶ್ರಮ, ದಕ್ಷಿಣ ಆಫ್ರಿಕಾದ ಜೀವನ, ನಂತರ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹೀಗೆ ಅವರ ಜೀವನ ವೃತ್ತಾಂತಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಗುವುದು' ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ.ಜೆ.ಎಸ್.ಪಾಟೀಲ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.