ADVERTISEMENT

ಒಣತ್ಯಾಜ್ಯ ಪಡೆಯಲು ಐಟಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: ಬಿಬಿಎಂಪಿ ಮನೆ- ಮನೆಗಳಿಂದ ಸಂಗ್ರಹಿಸುವ, ಪುನರ್ ಬಳಕೆ ಮಾಡಬಹುದಾದಂತಹ ಒಣ ತ್ಯಾಜ್ಯವನ್ನು ಪಡೆಯಲು ಐಟಿಸಿ ಕಂಪೆನಿಯು ಮುಂದೆ ಬಂದಿದೆ. ರಾಜ್ಯ ಸರ್ಕಾರ, ಬಿಬಿಎಂಪಿ ಸಹಕಾರ ನೀಡಿದಲ್ಲಿ ಪ್ರತಿ ನಿತ್ಯ 200-300 ಟನ್‌ವರೆಗೆ ಒಣ ತ್ಯಾಜ್ಯವನ್ನು ಪಡೆಯಲು ಕಂಪೆನಿ ನಿರ್ಧರಿಸಿದೆ.

  ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದ ನಂತರ ಬಿಬಿಎಂಪಿ ಒಣ ತ್ಯಾಜ್ಯವನ್ನು ಪಡೆಯಲು ಐಟಿಸಿ ಕಂಪೆನಿಯನ್ನು ಕೋರಿತ್ತು. ಅದಕ್ಕೆ ಕಂಪೆನಿಯು ಪೂರಕವಾಗಿ ಸ್ಪಂದಿಸಿದೆ.

ಪ್ರಸ್ತುತ ಐಟಿಸಿ ಕಂಪೆನಿಯು ಕೆಲವು ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ಪುನರ್ ಬಳಕೆ ಮಾಡಬಹುದಾದಂತಹ ಒಣ ತ್ಯಾಜ್ಯವನ್ನು ಪಡೆಯುತ್ತಿದೆ. ಹೀಗೆ ಪಡೆದಂತಹ ಒಣ ತ್ಯಾಜ್ಯಕ್ಕೆ ಕಂಪೆನಿಯು ಕೆ.ಜಿ.ಗೆ ಎರಡು ರೂಪಾಯಿ ನೀಡಲಿದೆ.

 ದರ ನಿಗದಿ ಬಗ್ಗೆ ಮಾತುಕತೆ: `ಬಿಬಿಎಂಪಿಯು ಪೂರೈಸಲಿರುವ ಒಣ ತ್ಯಾಜ್ಯಕ್ಕೆ ಯಾರಿಗೆ, ಎಷ್ಟು ದರ ನೀಡಬೇಕು ಎಂಬುದರ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ. ಅಂತಿಮ ಸುತ್ತಿನ ಮಾತುಕತೆ ನಂತರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ~ ಎಂದು ಐಟಿಸಿ ಕಂಪೆನಿ ಹಿರಿಯ ವ್ಯವಸ್ಥಾಪಕ ಮುರುಗೇಶನ್ `ಪ್ರಜಾವಾಣಿ~ಗೆ ತಿಳಿಸಿದರು.

ಬಿಬಿಎಂಪಿಯು ಪ್ರಸ್ತುತ ಐಟಿಸಿ ಕಂಪೆನಿಗೆ ಒಣ ತ್ಯಾಜ್ಯ ವಿಂಗಡಿಸುವುದಕ್ಕಾಗಿ ಶಿವಾಜಿನಗರ ಕ್ರೀಡಾಂಗಣ, ಮಲ್ಲೇಶ್ವರ ಹಾಗೂ ಅಲ್ಲಾಳಸಂದ್ರ ಬಳಿ ತಾತ್ಕಾಲಿಕವಾಗಿ ಜಾಗ ನೀಡಿದೆ. ಇದಲ್ಲದೆ, ರಹೇಜಾ, ಮಂತ್ರಿ ಡೆವಲಪರ್ಸ್‌, ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ಗಳಿಂದಲೂ ಕಂಪೆನಿಯು ಪುನರ್ ಬಳಕೆ ಮಾಡಿಕೊಳ್ಳಬಹುದಾದಂತಹ ಒಣ ತ್ಯಾಜ್ಯವನ್ನು ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.