ADVERTISEMENT

ಓಂ ಶಕ್ತಿಗಳನ್ನು ಅಧಿಕಾರಕ್ಕೇರದಂತೆ ತಡೆಯಿರಿ: ಎ.ಕೆ ಸುಬ್ಬಯ್ಯ

ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆಯಿಂದ ಆಂದೋಲನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST

ಬೆಂಗಳೂರು: ಸಂವಿಧಾನದ ಆಶಯ ಕಾಪಾಡಲು ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ‘ಓಂ ಶಕ್ತಿ‘ಗಳು ಅಧಿಕಾರಕ್ಕೆ ಏರದಂತೆ ತಡೆಯಬೇಕಾಗಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆಯ ಗೌರವ ಅಧ್ಯಕ್ಷ, ವಕೀಲ ಎ.ಕೆ ಸುಬ್ಬಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗ ಸಂವಿಧಾನ ಮೌಲ್ಯಗಳು ಅಪಾಯಕ್ಕೆ ಸಿಲುಕಿದ್ದವು. ಈಗ ಸಂವಿಧಾನವನ್ನೇ ಬದಲು ಮಾಡುತ್ತೇವೆ ಎಂದು ಹೇಳುವವರು ಅಧಿಕಾರದಲ್ಲಿದ್ದು, ಸಂವಿಧಾನ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ. ಅವರನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕಾಗಿದೆ ಎಂದರು.

ವೇದಿಕೆಯ ರಾಜಕೀಯ ಕ್ರಿಯಾ ಸಮಿತಿಯ ಬಿ.ಟಿ. ಲಲಿತಾ ನಾಯಕ ಮಾತನಾಡಿ, ದಮನಿತ ಸಮುದಾಯದ ಪರವಾಗಿ ಹೋರಾಟ ಮಾಡಿದರೆ, ಸತ್ಯ ಹೇಳಿದರೆ ನಕ್ಸಲರ ಪಟ್ಟ ಕಟ್ಟಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸ್ವಿಸ್‌ ಬ್ಯಾಂಕ್‌ನಿಂದ ಕಪ್ಪುಹಣ ತಂದು ದೇಶದ ಬಡವರ ಖಾತೆಗೆ ₹15 ಲಕ್ಷ ಹಾಕಾಲಾಗುವುದು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬಡವರ ಖಾತೆಗೆ 15 ಪೈಸೆಯನ್ನೂ ಹಾಕಿಲ್ಲ.  ಇಂತಹವರಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.

ವೇದಿಕೆಯ ಪ್ರೊ. ಬಾಬೂ ಮ್ಯಾಥ್ಯೂ ಇರ್ಶಾದ್‌ ಅಹ್ಮದ್‌ ದೇಸಾಯಿ, ನೂರ್‌ ಶ್ರೀಧರ್‌, ಸಂಚಾಲಕಿ ಅಖಿಲಾ, ಗೌರಿ, ಕ್ಷಿತಿಜ್‌ ಅರಸ್‌ ಇದ್ದರು.
**
ಶಿರಸಿಯಿಂದ ಆಂದೋಲನ
ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಮತಾಂಧ ಶಕ್ತಿಗಳ ವಿರುದ್ಧ ರಾಜ್ಯದಾದ್ಯಂತ ಜನಾಂದೋಲನ ಹಮ್ಮಿಕೊಂಡಿದೆ. ‌ಏಪ್ರಿಲ್‌ 5ರಂದು ಶಿರಸಿ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ (ನಟ ಪ್ರಕಾಶ ರೈ ಭಾಷಣ ಮಾಡಿದ ಬಳಿಕ ಇದೇ ಕಲ್ಯಾಣ ಮಂಟಪವನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಚಗೊಳಿಸಿದ್ದರು) ಗುಜರಾತ್‌ ವಡಗಾಂ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.

ಅಂದು ಸಂಜೆ ಶಿವಮೊಗ್ಗದಲ್ಲಿ ಮೇವಾನಿ ಮತ್ತು ನಟ ಪ್ರಕಾಶ ರೈ ಅವರೊಂದಿಗೆ ವಿವಿಧ ಧರ್ಮಗಳ ಮುಖಂಡರು, ಪ್ರಗತಿಪರ ಚಿಂತಕರು ಸಾಹಿತಿಗಳು ಸಂವಾದ ನಡೆಸಲಿದ್ದಾರೆ.

ಏಪ್ರಿಲ್‌ 6ರಂದು ಸಂಜೆ ಗಂಗಾವತಿಯಲ್ಲಿ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದೆ. ಸಂವಿಧಾನ ವಿರೋಧಿಗಳನ್ನು ಮತ್ತು ಮತಾಂಧರನ್ನು ಸೋಲಿಸೋಣ,  ಜನ ಸಾಮಾನ್ಯರ ಹಕ್ಕೊತ್ತಾಯಗಳಿಗಾಗಿ ದನಿ ಎತ್ತೋಣ, ಜನರ ನೋವಿಗೆ ದನಿಯಾಗಬಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂಬ ಘೋಷ ವಾಕ್ಯದೊಂದಿಗೆ ವೇದಿಕೆಯಡಿ ರಾಜ್ಯದಾದ್ಯಂತ  ಆಂದೋಲನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.