ADVERTISEMENT

ಕಂಪ್ಯೂಟರೀಕರಣ: ಮಾಹಿತಿಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಬೆಂಗಳೂರು: ಕಂದಾಯ ಇಲಾಖೆಯ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸುವಂತೆ ಈ ಹಿಂದೆ ಹೊರಡಿಸಲಾಗಿದ್ದ ಆದೇಶದ ಅನ್ವಯ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಕಂದಾಯ ಇಲಾಖೆಗೆ ಸೋಮವಾರ ನಿರ್ದೇಶಿಸಿದೆ.

2003ರ ಪ್ರಕರಣವೊಂದರ ವಿಚಾರಣೆ ವೇಳೆ ಹಳೆಯ ಕಂದಾಯ ದಾಖಲೆಗಳು ನಾಪತ್ತೆಯಾಗಿರುವುದು ಕೋರ್ಟ್ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ, ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸುವಂತೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಕಳೆದ ಬಾರಿ ವಿಚಾರಣೆ ವೇಳೆ ಆದೇಶಿಸಿದ್ದರು.

ಈ ಪ್ರಕರಣವು ಸೋಮವಾರ ಪುನಃ ವಿಚಾರಣೆಗೆ ಬಂದಾಗ ಕೋರ್ಟ್‌ನಲ್ಲಿ ಹಾಜರು ಇದ್ದ  ಕಂದಾಯ  ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಮಾಹಿತಿ ಕೇಳಿದ್ದಾರೆ. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಶೀಘ್ರದಲ್ಲಿ ಅದು ಮುಕ್ತಾಯಗೊಳ್ಳಲಿದೆ ಎಂದು ಚಾವ್ಲಾ ವಿವರಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ವಸ್ತುಸ್ಥಿತಿ ಬಯಸಿ ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.