ADVERTISEMENT

ಕಟ್ಟಡ ನಿರ್ಮಾಣವಾಗದಿದ್ದರೆ ಕಾನೂನು ಕ್ರಮ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಪಡೆದು ಎರಡು ವರ್ಷಗಳಾದರೂ ಕಟ್ಟಡ ನಿರ್ಮಾಣ ಆರಂಭಿಸದ ಮಾಲೀಕರು ಈಗ ನಿವೇಶನವನ್ನೇ ಕಳೆದುಕೊಳ್ಳಬೇಕಾದ ಎಚ್ಚರಿಕೆಯ ಸೂಚನೆಯೊಂದನ್ನು ಹೈಕೋರ್ಟ್ ನೀಡಿದೆ.

ಬಿಡಿಎ ಕಾಯ್ದೆ ಅನ್ವಯ ನಿವೇಶನ ನೋಂದಣಿಗೊಂಡ ಎರಡು ವರ್ಷಗಳ ಒಳಗೆ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ ಈ ಅವಧಿ ಮೀರಿದರೂ ನಿರ್ಮಾಣ ಕಾರ್ಯ ಆರಂಭಿಸದ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಬಿಡಿಎಗೆ ಬುಧವಾರ ಸೂಚಿಸಿದ್ದಾರೆ.

ಕೆಂಗೇರಿ ಹಾಗೂ ಯಶವಂತಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿನ ಪೈಕಿ ಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಜಮೀನುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಭೂಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಈ ಬಡಾವಣೆಯೂ ಸೇರಿದಂತೆ, ಅರ್ಕಾವತಿ ಲೇಔಟ್, ಅಂಜನಾಪುರ ಲೇಔಟ್ ಮುಂತಾದ ಬಡಾವಣೆಗಳಲ್ಲಿ ನಿವೇಶನ ಪಡೆದುಕೊಂಡಿರುವವರ ಪೈಕಿ ಹಲವರು ಇದುವರೆಗೆ ಕಟ್ಟಡ ನಿರ್ಮಾಣ ಆರಂಭಿಸದೇ ಇರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದಿತು. ಆದುದರಿಂದ ಬಿಡಿಎ ನಿವೇಶನ ಹಂಚಿಕೆಯ ನಿಯಮದ ಅನ್ವಯ ನೋಟಿಸ್ ಜಾರಿಗೊಳಿಸುವಂತೆ ವಕೀಲ ಮಲ್ಲಿಕಾರ್ಜುನ ಅವರಿಗೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಈ ನೋಟಿಸ್ ನೀಡಿದ ಹೊರತಾಗಿಯೂ ಕಟ್ಟಡ ನಿರ್ಮಾಣ ಆರಂಭಿಸದೆ ಹೋದರೆ, ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ, ನಿಗದಿತ ಅವಧಿಯಲ್ಲಿ ಕಟ್ಟಡ ನಿರ್ಮಾಣ ಮಾಡದೇ ಹೋದರೆ, ನಿವೇಶನ ವಾಪಸು ಪಡೆಯುವುದೂ ಸೇರಿದಂತೆ ಕಾನೂನಿನಲ್ಲಿ ಇರುವಂತೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರ ಈಗ ಬಿಡಿಎ ಮೇಲಿದೆ. ಇದೇ ವೇಳೆ, ಕಟ್ಟಡ ನಿರ್ಮಾಣ ಆರಂಭಿಸದ ಮಾಲೀಕರ ಬಗೆಗೆ ಮೂರು ದಿನಗಳಲ್ಲಿ ಮಾಹಿತ ನೀಡುವಂತೆ ನ್ಯಾಯಮೂರ್ತಿಗಳು ಬಿಡಿಎಗೆ ಆದೇಶಿಸಿದ್ದಾರೆ.

ಪಾಲಿಕೆಗೆ ನೋಟಿಸ್: ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ ಸಭಾಂಗಣದಲ್ಲಿನ ಸ್ವಲ್ಪ ಜಾಗವನ್ನು ಪಾಲಿಕೆಯ ವಾರ್ಡ್ ಕಟ್ಟಡಕ್ಕೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

`ಸ್ಪೋರ್ಟ್ಸ್ ಪ್ರಮೋಷನ್ ಅಸೋಸಿಯೇಷನ್~ ಈ ಅರ್ಜಿ ಸಲ್ಲಿಸಿದೆ. ಅರ್ಜಿಗೆ ಸಂಬಂಧಿಸಿದಂತೆ ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಹಾಗೂ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದೆ.

ಸಭಾಂಗಣಕ್ಕೆ ಸೇರಿದ ಸುಮಾರು 18 ಅಡಿ ಜಾಗವನ್ನು ಪಾಲಿಕೆಯ ವಾರ್ಡ್ ಕಚೇರಿ ಕಾರ್ಯನಿರ್ವಹಿಸಲು ನೀಡಲಾಗಿದೆ. ಇದರಿಂದಾಗಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕಷ್ಟವಾಗುತ್ತಿದೆ. ಅದರ ಸಲಕರಣೆಗಳನ್ನು ಇಡಲು ಕೂಡ ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಆರೋಪ.

ಈ ಬಗ್ಗೆ ಬೈರಸಂದ್ರ ವಾರ್ಡ್ ಸದಸ್ಯ ಎನ್.ನಾಗರಾಜ್ ಅವರಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎಂದಿರುವ ಅರ್ಜಿದಾರರು, ವಾರ್ಡ್‌ಗೆ ಸ್ಥಳಾವಕಾಶ ಕಲ್ಪಿಸಿ ಹೊರಡಿಸಲಾದ ಆದೇಶವನ್ನು ರದ್ದು ಮಾಡುವಂತೆ ಕೋರಿದ್ದಾರೆ.

ಕೈಬಿಟ್ಟ ನ್ಯಾಯಾಂಗ ನಿಂದನೆ: ಜಮೀನೊಂದನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಬದಲಾವಣೆ ಕೋರಿದ್ದ ವಕೀಲ ಸಿರಾಜಿನ್ ಬಾಷಾ ಅವರ ವಿರುದ್ಧ ದಾಖಲು ಮಾಡಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಬುಧವಾರ ಕೈಬಿಟ್ಟಿದೆ.

ಬಾಷಾ ಅವರು ತಮ್ಮ ವಿರುದ್ಧ ದಾಖಲು ಮಾಡಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಯಡಿಯೂರಪ್ಪ ತಡೆ ಕೋರಿ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಒಂದು ಅರ್ಜಿಯ ವಿಚಾರಣೆ ನಡೆಸಿ ಯಡಿಯೂರಪ್ಪನವರ ಪರ ತೀರ್ಪು ನೀಡಿದ್ದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇನ್ನೊಂದು ಅರ್ಜಿಯಲ್ಲಿಯೂ ಅದೇ ಆದೇಶ ಹೊರಡಿಸಿದ್ದರು.

ಸರಿಯಾಗಿ ವಿಚಾರಣೆ ನಡೆಸದೆ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದ್ದ ಬಾಷಾ, ವಿಚಾರಣೆ ಬೇರೆ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ಕೋರಿದ್ದರು. ಇದರಿಂದ ಕೋರ್ಟ್ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬಾಷಾ ಅವರು ಬೇಷರತ್ ಕ್ಷಮೆಯಾಚಿಸಿದ ಕಾರಣದಿಂದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರ್ಟ್ ಈಗ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.