ADVERTISEMENT

ಕಡಲೆಕಾಯಿ ಪರಿಷೆ: 7ಲಕ್ಷ ಜನ ಭೇಟಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 20:24 IST
Last Updated 15 ನವೆಂಬರ್ 2017, 20:24 IST
ಕಡಲೆಕಾಯಿ ಪರಿಷೆ: 7ಲಕ್ಷ ಜನ ಭೇಟಿ
ಕಡಲೆಕಾಯಿ ಪರಿಷೆ: 7ಲಕ್ಷ ಜನ ಭೇಟಿ   

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬುಧವಾರ ತೆರೆ ಬಿದ್ದಿತು. ಆದರೆ, ಇನ್ನೂ ಒಂದು ವಾರ ಈ ರಸ್ತೆಯಲ್ಲಿ ಕಡಲೆಕಾಯಿ ಮಾರಾಟ ಮುಂದುವರಿಯುತ್ತದೆ.

‘ಸೋಮವಾರ ಸಣ್ಣ ಪರಿಷೆ, ಮಂಗಳವಾರ ಮತ್ತು ಬುಧವಾರ ದೊಡ್ಡ ಪರಿಷೆ ನಡೆಯಿತು. ಸಾಮಾನ್ಯವಾಗಿ ಪ್ರತಿ ವರ್ಷ 6 ಲಕ್ಷದಿಂದ 7 ಲಕ್ಷ ಜನ ಭಾಗವಹಿಸುತ್ತಾರೆ. ಈ ಬಾರಿ ಸಂಖ್ಯೆ ಹೆಚ್ಚಾದಂತೆ ಕಂಡು ಬಂತು’ ಎಂದು ದೊಡ್ಡಗಣಪತಿ ದೇವಸ್ಥಾನದ ಅರ್ಚಕ ಗುರುನಾಥ ತಿಳಿಸಿದರು.

‘ಮಲ್ಲೇಶ್ವರದಲ್ಲಿಯೂ ಈ ಸಲ ಕಡಲೆಕಾಯಿ ಪರಿಷೆ ನಡೆದಿತ್ತು. ಹೀಗಾಗಿ ಜನ ಕಡಿಮೆಯಾಗಬ
ಹುದೆಂದು ಅಂದಾಜಿಸಿದ್ದೆವು. ಆದರೆ, ಹಾಗಾಗಲಿಲ್ಲ’ ಎಂದರು.

ADVERTISEMENT

ಎರಡು ಸಾವಿರ ಕಡಲೆಕಾಯಿ ವ್ಯಾಪಾರಿಗಳು, 150ಕ್ಕೂ ಹೆಚ್ಚು ತಿಂಡಿ–ತಿನಿಸು ಗಾಡಿಗಳು ಹಾಗೂ ಅಲಂಕಾರಿಕ ವಸ್ತುಗಳು ಮಳಿಗೆಗಳು ಕಂಡುಬಂದವು.

ಆರಂಭದಲ್ಲಿ ವಹಿವಾಟು ಕೊರತೆ:  ಬೆಂಗಳೂರು, ಕೋಲಾರ, ಮಾಲೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಹೊಸಕೋಟೆ ಮಾತ್ರವಲ್ಲದೆ, ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಂದಲೂ ಕಡಲೆಕಾಯಿ ವ್ಯಾಪಾರಿಗಳು ನಗರಕ್ಕೆ ಬಂದಿದ್ದರು.

‘ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಹಾಗೂ ಬುಧವಾರ ಸಂಜೆ ವ್ಯಾಪಾರ ಚೆನ್ನಾಗಿ ಆಗಿದೆ’ ಎಂದು ತಮಿಳುನಾಡಿನ ರೈತ ಷಣ್ಮುಗನ್‌ ತಿಳಿಸಿದರು.

ಮೊದಲ ದಿನ ಸೇರು ಕಡಲೆಕಾಯಿ ₹50ರಿಂದ ₹40ಕ್ಕೆ ಮಾರಾಟವಾಗುತ್ತಿತ್ತು. ಕೊನೆಯ ದಿನ ₹20 ರಿಂದ ₹15 ಆಗಿತ್ತು. ಬಣ್ಣ, ಗಾತ್ರ ಆಧರಿಸಿ ಹಸಿ ಕಾಯಿ, ಹುರಿದ ಕಾಯಿಗಳಿಗೆ ಪ್ರತ್ಯೇಕ ಬೆಲೆ ನಿಗದಿಪಡಿಸಲಾಗಿತ್ತು.

ಒಂದು ಬೀಜದ ಗಿಡ್ಡನೆಯ ಕಾಯಿ, ಎರಡು ಬೀಜಗಳ ಉದ್ದನೆಯ ಕಾಯಿ, ಬಾದಾಮಿ ಕಾಯಿ, ಕಡುಮಣ್ಣಿನಬಣ್ಣದ ಕಾಯಿ, ಹುರಿದ ಮತ್ತು ಬೇಯಿಸಿದ ಕಡಲೆಕಾಯಿ... ಹೀಗೆ ತರಹೇವಾರಿ ಕಡಲೆಕಾಯಿ  ಮಾರಾಟವಾದವು.

‘ಗ್ರಾಮೀಣ ಸೊಗಡಿನ ಜಾತ್ರೆಯ ಪರಿಸರವನ್ನು ಪರಿಷೆ ಮೂಲಕ ನಗರಕ್ಕೆ ಪರಿಚಯಿಸಲಾಗಿದೆ. ಆಟದ ಯಂತ್ರಗಳು, ಬಣ್ಣ ಬಣ್ಣದ ಆಟಿಕೆಗಳು, ಅಲಂಕಾರಿಕ ವಸ್ತುಗಳು ಮಕ್ಕಳಿಗೆ ತುಂಬಾ ಇಷ್ಟವಾದವು’ ಎಂದು ಪರಿಷೆಗೆ ಬಂದಿದ್ದ ಜಾನಕಿ ಹೇಳಿದರು.

ಸಂಚಾರದಟ್ಟಣೆ: ಕೊನೆಯ ದಿನ ನಗರದ ನಾನಾ ಭಾಗಗಳಿಂದ ಜನ ಪರಿಷೆಗೆ ಲಗ್ಗೆ ಇಟ್ಟಿದ್ದರಿಂದ ಬಸವನಗುಡಿ ಕೂಡುವ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಿತ್ತು. ಇದನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.