ADVERTISEMENT

ಕದ್ದುಮುಚ್ಚಿ ಹೊರಹೋಗಲು ವಕೀಲರ ಯತ್ನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:35 IST
Last Updated 2 ಮಾರ್ಚ್ 2012, 19:35 IST

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಮೇಲೆ ಹಲ್ಲೆ ಮಾಡಿ ಗೂಂಡಾಗಳಂತೆ ವರ್ತಿಸಿದ ವಕೀಲರು, ಕೊನೆಗೆ ಕದ್ದುಮುಚ್ಚಿ ಕೋರ್ಟ್ ಆವರಣದಿಂದ ಹೊರ ಹೋಗುವ ಪ್ರಯತ್ನ ನಡೆಸಿದರು.
ವಕೀಲರ ಗೂಂಡಾಗಿರಿಯಿಂದ ಕೋರ್ಟ್ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಯನ್ನು ನ್ಯಾಯಾಧೀಶರ ವಾಹನದಲ್ಲಿ ಮೆಜೆಸ್ಟಿಕ್‌ಗೆ ತಲುಪಿಸಲಾಯಿತು.

ಆಗ ಕದ್ದುಮುಚ್ಚಿ ನ್ಯಾಯಾಧೀಶರ ವಾಹನದಲ್ಲಿ ಹೊರ ಹೋಗಲು ಪ್ರಯತ್ನಿಸಿದ ವಕೀಲರನ್ನು ಪತ್ತೆ ಹಚ್ಚಿದ ಪೊಲೀಸರು ಹೊರಗೆ ದಬ್ಬಿದರು. ಗೂಂಡಾಗಿರಿ ತೋರಿದ ವಕೀಲರ ವಿರುದ್ಧ ಲಾಠಿ ಪ್ರಹಾರ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ, ವಕೀಲರು ಓಡಿ ಹೋಗಿ ಕೋರ್ಟ್ ಒಳಗೆ ಬಚ್ಚಿಟ್ಟುಕೊಂಡರು.
 
ಒಳಗೆ ಹೋದ ನಂತರವೂ ಸುಮ್ಮನಾಗದ ವಕೀಲರು, ಕುರ್ಚಿ, ಮೇಜುಗಳನ್ನು ಮೇಲಿಂದ ಎಸೆದಾಗ ಆತಂಕಗೊಂಡ ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿಕೊಂಡರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ. ಸಂಜೆವರೆಗೂ ಆತಂಕದಲ್ಲೇ ಕಾರ್ಯನಿರ್ವಹಿಸಲಾಯಿತು ಎಂದು ಸಿಬ್ಬಂದಿಯೊಬ್ಬರು  ತಿಳಿಸಿದರು.

ನ್ಯಾಯಾಲಯ ಕಟ್ಟಡಗಳ ಕಿಟಕಿ, ಗ್ಲಾಸುಗಳನ್ನು ಪುಡಿ, ಪುಡಿ ಮಾಡಿದರು. ವಾಹನಗಳಿಗೂ ಬೆಂಕಿಹಚ್ಚಿದ್ದರಿಂದ ಭಯದ ವಾತಾವರಣವಿತ್ತು. ಆಚೆಗೆ ಹೋಗಲು ಆಗುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡರು.

ಆರು ದಿವಸ ನಿಷೇಧಾಜ್ಞೆ

ಬೆಂಗಳೂರು:  ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವಕೀಲರು ಶುಕ್ರವಾರ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರದಿಂದ (ಮಾ.3) ಆರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.
 
ಅಶೋಕನಗರ, ಹಲಸೂರುಗೇಟ್, ಸಿಲ್ವರ್‌ಜ್ಯುಬಿಲಿ ಪಾರ್ಕ್, ಸಂಪಂಗಿರಾಮನಗರ, ಕಬ್ಬನ್‌ಪಾರ್ಕ್, ವಿಧಾನಸೌಧ, ಹೈಗ್ರೌಂಡ್ಸ್, ಚಿಕ್ಕಪೇಟೆ, ಉಪ್ಪಾರಪೇಟೆ ಮತ್ತು ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಸಾರ್ವಜನಿಕರ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಿರ್ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.