ADVERTISEMENT

ಕನ್ನಡದಲ್ಲಿ ಸಿಗ್ನಲ್‌ ಅಂಕಿಗಳು

ವಿಜಯ ವಿಠಲ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳ ಅನ್ವೇಷಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 20:03 IST
Last Updated 30 ಮಾರ್ಚ್ 2018, 20:03 IST
ಸಾಧನದೊಂದಿಗೆ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ದಿನೇಶ್‌ ಇದ್ದಾರೆ.
ಸಾಧನದೊಂದಿಗೆ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ದಿನೇಶ್‌ ಇದ್ದಾರೆ.   

ಬೆಂಗಳೂರು: ಸಂಚಾರ ಸಿಗ್ನಲ್‌ ಟೈಮರ್‌ನಲ್ಲಿ ಕನ್ನಡದ ಅಂಕಿಗಳನ್ನು ಪ್ರದರ್ಶಿಸುವ ಸಾಧನವನ್ನು ವಿಜಯ ವಿಠಲ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

‘ನಗರದ ಎಷ್ಟೊ ಟ್ರಾಫಿಕ್‌ ಸಿಗ್ನಲ್ ಬಳಿ ವಾಹನ ನಿಲ್ಲಿಸಲು 120 ಸೆಕೆಂಡ್‌ವರೆಗೂ ಅವಕಾಶ ಇರುತ್ತದೆ. ಕನ್ನಡದ ಅಂಕಿಗಳು ಪ್ರದರ್ಶನಗೊಂ
ಡರೆ ಅವುಗಳನ್ನು ಕಲಿಯಬಹುದು. ನಮ್ಮವರಿಗೆ ಕನ್ನಡದ ಅಂಕಿಗಳ ಬಗ್ಗೆ ಗೊತ್ತಿರುವುದಿಲ್ಲ. ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಈ ಸಾಧನವನ್ನು ಅಭಿವೃದ್ಧಿ ಪಡಿಸಿದೆವು’ ಎನ್ನುತ್ತಾರೆ ವಿದ್ಯಾರ್ಥಿಗಳು.

ಎಲೆಕ್ಟ್ರಾನಿಕ್ಸ್‌ ಎಂಡ್‌ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ನಿಶಿತಾ ಚೆಂಗಪ್ಪ, ಎ.ವಿ.ತೇಜಸ್ವಿನಿ, ಜೆ.ನವೀನ್‌ ಕುಮಾರ್‌ ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ADVERTISEMENT

ಸದ್ಯ 7 ವಿಭಾಗಗಳಲ್ಲಿ (ಸೆಗ್ಮೆಂಟ್‌) ಸಿಗ್ನಲ್‌ ಟೈಮರ್‌ ಉಪಯೋಗಿಸುತ್ತಿದ್ದೇವೆ. ಅದರಲ್ಲಿ ಇಂಗ್ಲಿಷ್‌ ಅಂಕಿಗಳನ್ನು ಮಾತ್ರ ಬಳಸಲು ಸಾಧ್ಯ. ಕನ್ನಡ ಅಂಕಿಗಳಿಗಾಗಿ ನಮ್ಮ ವಿದ್ಯಾರ್ಥಿಗಳು 21 ವಿಭಾಗಗಳ ಬಾಕ್ಸ್‌ ರೂಪಿಸಿದ್ದಾರೆ ಎಂದು ಸಂಶೋಧನಾ ಮಾರ್ಗದರ್ಶಕ ಪ್ರೊ.ದಿನೇಶ್‌ ಅನ್ವೇಕರ್‌ ತಿಳಿಸಿದರು.

ಕೆಂಪು ಮತ್ತು ಹಸಿರು ಬಣ್ಣಗಳಲ್ಲಿರುವ ಈ ಟೈಮರ್‌, 199 ಸೆಕೆಂಡ್‌ ವರೆಗೂ ಪ್ರದರ್ಶನಗೊಳ್ಳಲಿದೆ. ಈಗಿರುವ ಸಿಗ್ನಲ್‌ಗಳಿಗೆ ಸುಲಭವಾಗಿ 10 ನಿಮಿಷಗಳಲ್ಲಿ ಜೋಡಿಸಬಹುದು. ಕಡಿಮೆ ಖರ್ಚು ಹಾಗೂ ಅಲ್ಪಾವಧಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು.

‘ಹಿಂದಿ ಭಾಷೆಯಲ್ಲಿಯೂ ಅಭಿವೃದ್ಧಿಪಡಿಸುವ ಬಗ್ಗೆ ವಿದ್ಯಾರ್ಥಿಗಳು ಪ್ರಯತ್ನ ಮಾಡುತ್ತಿದ್ದಾರೆ. ಇದು ನಮ್ಮದೇ ವಿಶೇಷ ಆಗಿರುವುದರಿಂದ ಈ ಸಾಧನಕ್ಕೆ ಪೇಟೆಂಟ್‌ ಪಡೆಯಲು ಅರ್ಜಿ ಸಲ್ಲಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.