ADVERTISEMENT

ಕನ್ನಡಿಗರಿಗೆ ನಾನು ಚಿರಋಣಿ:ಪಿ.ಬಿ. ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 20:10 IST
Last Updated 4 ಸೆಪ್ಟೆಂಬರ್ 2011, 20:10 IST
ಕನ್ನಡಿಗರಿಗೆ ನಾನು ಚಿರಋಣಿ:ಪಿ.ಬಿ. ಶ್ರೀನಿವಾಸ್
ಕನ್ನಡಿಗರಿಗೆ ನಾನು ಚಿರಋಣಿ:ಪಿ.ಬಿ. ಶ್ರೀನಿವಾಸ್   

ಬೆಂಗಳೂರು: `ಮೂರು ದಶಕಗಳ ಕಾಲ ನನ್ನನ್ನು ಹರಸಿ, ಪ್ರೋತ್ಸಾಹಿಸಿದ ಕನ್ನಡಿಗರಿಗೆ ಎಂದಿಗೂ ಋಣಿಯಾಗಿರುತ್ತೇನೆ~ ಎಂದು ಹಿರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಹೇಳಿದರು.

ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ `ಆದರ್ಶ ರತ್ನ~ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಸಂಸದ ಅನಂತಕುಮಾರ್ ಮಾತನಾಡಿ, `ಇತ್ತೀಚೆಗೆ ಕನ್ನಡ- ಇಂಗ್ಲಿಷ್ ಭಾಷೆ ಮಿಶ್ರಿತವಾದ ಗೀತೆಗಳ ಹಾವಳಿ ತೀವ್ರವಾಗಿದೆ. ಇದರಿಂದ ಸಂಗೀತದ ಮಾಧುರ್ಯವೇ ಕಾಣೆಯಾಗಿದೆ~ ಎಂದು ವಿಷಾದಿಸಿದರು.
`ಕನ್ನಡತನವನ್ನು ಉಳಿಸಿಕೊಂಡಿರುವ ಹಾಗೂ ಭಾವನೆಗಳ ಅಭಿವ್ಯಕ್ತಿ ಎನಿಸಿರುವ ಸುಗಮ ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ~ ಎಂದರು.

`ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸುಗಮ ಸಂಗೀತ ಪ್ರಸಾರ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕವಿ ಬಿ.ಆರ್. ಲಕ್ಷ್ಮಣರಾವ್ ಅವರಿಗೆ `ಆದರ್ಶ ಸಾಹಿತ್ಯ ರತ್ನ~, ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್,ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ.ಎಂ. ಶಿವಲಿಂಗಯ್ಯ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ಅವರಿಗೆ `ಆದರ್ಶ ಸಮಾಜ ಸೇವಾ ರತ್ನ~ ಹಾಗೂ ಖಾಸಗಿ ಸುದ್ದಿ ವಾಹಿನಿಯ ಹಮೀದ್ ಪಾಳ್ಯ ಅವರಿಗೆ `ಆದರ್ಶ ಮಾಧ್ಯಮ ರತ್ನ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ, ಶಾಸಕ ಸಿ.ಎಸ್. ಪುಟ್ಟರಾಜು, ಹಿರಿಯ ಗಾಯಕಿ ಬಿ.ಕೆ. ಸುಮಿತ್ರಾ, ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಟಿ.ಎ. ಶರವಣ, ಟ್ರಸ್ಟ್‌ನ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.