ADVERTISEMENT

ಕನ್ನಡ ಭಾಷೆ, ಕಲೆ: ಪೋಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಯಲಹಂಕ: ಯುಗಾದಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸು ವಂತಹ ಕಾರ್ಯಗಳು ಎಲ್ಲ ಪ್ರದೇಶಗಳಲ್ಲೂ ನಡೆಯಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅಭಿಪ್ರಾಯಪಟ್ಟರು.

ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಎಚ್‌ಆರ್‌ಬಿ ಆರ್ ಬಡಾವಣೆಯ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ `ಯುಗಾದಿ ಉತ್ಸವ-2012~ ಸಮಾರಂಭದಲ್ಲಿ ಅವರು  ಮಾತನಾಡಿದರು.

ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಯುಗಾದಿ ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸುವ ಮೂಲಕ ಸ್ಥಳೀಯ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡತನದ ಮನಸ್ಸುಗಳನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಒಕ್ಕೂಟ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಎ.ಬಿ.ಸುಬ್ಬಯ್ಯ ಅವರಿಗೆ `ಯುಗಾದಿ ಪುರಸ್ಕಾರ-2012~ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕ್ರೀಡೆಯನ್ನು ಬೆಳೆಸುವ ಉದ್ದೇಶವಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಕೆ.ಸಿ.ಜಗನ್ನಾಥರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಜೆ.ಜಾರ್ಜ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಬಿಬಿಎಂಪಿ ಸದಸ್ಯ ಎಂ.ಸಿ.ಶ್ರೀನಿವಾಸ್, ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮಾಲೀಕ ತುಳಸೀರಾಮ್ ನಾಯ್ಡು, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಗಣೇಶ್‌ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಎನ್.ಮುನಿರಾಜು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿಶಂಕರ್ ನಿರೂಪಿಸಿದರು.

ಬಹುಮಾನ: ಯುಗಾದಿ ಅಂಗವಾಗಿ ಬೆಂಗಳೂರು ನಗರ ಜಿಲ್ಲಾ ಮಟ್ಟದ ಕರ್ನಾಟಕದ ಸಾಂಪ್ರದಾಯಿಕ ವಿವಿಧ ಶೈಲಿಯ ಸಸ್ಯಾಹಾರಿ `ಹಳ್ಳಿ ಅಡುಗೆ~ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ, ದ್ವಿತೀಯ ಹಾಗೂ ತೃತೀಯಸ್ಥಾನ ಪಡೆದ ಗೀತಾ ಕೆಂಚಪ್ಪ (ಜೋಳದ ರೊಟ್ಟಿ ಮತ್ತು ಸಬ್ಜಿ), ವಿಜಯಾ ಶಿವಾನಂದ (ಶಾವಿಗೆ ಮತ್ತು ಹಕ್ಕಿರೊಟ್ಟಿ) ಹಾಗೂ ಲಕ್ಮೀ ರಾಜಪ್ಪ (ರಾಗಿಮುದ್ದೆ ಮತ್ತು ಗೊಜ್ಜು) ಅವರಿಗೆ 5, 3 ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.