ADVERTISEMENT

ಕನ್ನಡ ಸಾಹಿತ್ಯಕ್ಕೆ ಸಾವಿತ್ರಮ್ಮ ಕೊಡುಗೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದೇ ಅಪರೂಪವಾಗಿದ್ದ ಕಾಲದಲ್ಲಿ ಶಿಕ್ಷಣ ಪಡೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದವರು ಎಚ್‌.ವಿ.ಸಾವಿತ್ರಮ್ಮ’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಎಚ್‌.ವಿ.ಸಾವಿತ್ರಮ್ಮ ಶತಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.
‘ಮೈಸೂರು ಅರಸರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದರು. ನಾನು ಬಿ.ಎ ವ್ಯಾಸಂಗ ಮಾಡುವಾಗ ಕಾಲೇಜಿನಲ್ಲಿ 300 ಮಂದಿ ವಿದ್ಯಾರ್ಥಿ ಗಳಿದ್ದೆವು. ಸಾವಿತ್ರಮ್ಮ ಕಾಲೇಜಿನ ಏಕೈಕ ವಿದ್ಯಾರ್ಥಿನಿ. ಆದರೆ ಯಾವುದೇ ಅಂಜಿಕೆ ಇಲ್ಲದೆ ವ್ಯಾಸಂಗ ಮಾಡಿದ ಅವರು ಬಿ.ಎ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು’ ಎಂದು ನುಡಿದರು.

‘ಬಂಗಾಳಿ ಹಾಗೂ ಇಂಗ್ಲಿಷ್‌ನಿಂದ  ಅನೇಕ ಕೃತಿಗಳನ್ನು ಅವರು  ಕನ್ನಡಕ್ಕೆ ತಂದಿದ್ದಾರೆ. ಈ ಮೂಲಕ ಅವರು ಅನುವಾದ ಕ್ಷೇತ್ರಕ್ಕೂ ಕೊಡುಗೆ ನೀಡಿ ದ್ದಾರೆ. ಅವರ ಸಾಹಿತ್ಯ ಕಾರ್ಯದಿಂದ ಪ್ರೇರಣೆ ಹೊಂದಿದ ಅನೇಕ ಮಹಿಳೆಯರು ಆನಂತರ ಶಿಕ್ಷಣ ಪಡೆದು, ಸಾಹಿತ್ಯ ಕೃಷಿಯಲ್ಲಿ ತೊಡಗಿ ದರು. ಸಾವಿತ್ರಮ್ಮನವರ ಪುಸ್ತಕಗಳು ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೂ ದೊರೆಯು ವಂತಾಗಬೇಕು’ ಎಂದು ಆಶಿಸಿದರು.

ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ ಮಾತನಾಡಿ, ‘ಸಾಹಿತ್ಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಲೇಖಕಿ ಯರನ್ನು ದ್ವಿತೀಯ ದರ್ಜೆಯಲ್ಲಿಡ ಲಾಗಿದೆ. ಸಾಲುದೀಪಗಳು ಕೃತಿಯಲ್ಲಿ ಲೇಖಕಿಯರ ಬಗ್ಗೆ ಒಂದು ಮಿನುಗು ದೀಪವೂ ಇಲ್ಲ. ಲೇಖಕಿಯರನ್ನು ಗುರು ತಿಸುವ ಕೆಲಸ ಸರಿಯಾಗಿ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾವಿತ್ರಮ್ಮ ತಮ್ಮ ಕೃತಿಗಳಿಂದ ಗುರುತಿಸಿಕೊಂಡವರೇ ಹೊರತು ಅವರ ವ್ಯಕ್ತಿ ಪರಿಚಯ ಹೆಚ್ಚಿನ ಜನರಿಗೆ ಆಗಿರಲಿಲ್ಲ. ಅವರು ವಿಭಿನ್ನ ವಿಷಯಗಳ ಬಗ್ಗೆ ಕೃತಿ ರಚನೆ ಮಾಡುತ್ತಿದ್ದರು. ಅವ ರಿಂದ ಅನೇಕ ಲೇಖಕಿಯರು ಪ್ರೇರಣೆ ಪಡೆದು ಬರವಣಿಗೆ ಆರಂಭಿಸಿದರು’ ಎಂದು ತಿಳಿಸಿದರು.
‘ಹಳೆಯ ವಿಚಾರಗಳ ಬಗ್ಗೆ ಸಾಹಿತ್ಯ ರಚನೆ ಮಾಡುವುದರ ಜತೆಗೆ ಸದ್ಯದ ಸಮಸ್ಯೆಗಳ ಬಗ್ಗೆ ಬರವಣಿಗೆ ಹೆಚ್ಚಾ ಗಬೇಕು. ರಾಷ್ಟ್ರ ಹಾಗೂ ವಿಶ್ವ ಮಟ್ಟದ ಸಮಸ್ಯೆಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚನೆಯಾಗುತ್ತಿದೆ. ಆದರೆ, ಕನ್ನಡದಲ್ಲಿ ಈ ರೀತಿಯ ಸಾಹಿತ್ಯ ರಚನೆ ಆಗುತ್ತಿಲ್ಲ. ಹೀಗಾಗಿ ಪ್ರಸ್ತುತಕ್ಕೆ ಸ್ಪಂದಿಸುವ ಸಾಹಿತ್ಯ ರಚನೆಗೆ ಲೇಖಕರು ಮುಂದಾಗಬೇಕು’ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘ಲೇಖಕರ ಜನ್ಮ ಶತ ಮಾನೋತ್ಸವ ಆಚರಿಸುವ ಸರ್ಕಾರ ಲೇಖಕಿಯರ ಜನ್ಮ ಶತಮಾನೋತ್ಸವದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಈ ರೀತಿಯ ತಾರತಮ್ಯ ತಗ್ಗಬೇಕಿದೆ. ಸಾಹಿತ್ಯ ಅಕಾ ಡೆಮಿಯ ಸಹಯೋಗದಲ್ಲಿ ಸಾವಿತ್ರಮ್ಮ ಅವರ ಕೃತಿಗಳನ್ನು ಮರುಮುದ್ರಿಸಲು ಸಂಘ ಯೋಜನೆ ಹಾಕಿಕೊಂಡಿದೆ’ ಎಂದು ತಿಳಿಸಿದರು.

‘ಎಚ್‌.ವಿ.ಸಾವಿತ್ರಮ್ಮ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಲೇಖಕಿ ಉಮಾರಾವ್‌, ‘ಸಾವಿತ್ರಮ್ಮನವರ ಬರವಣಿಗೆಯಲ್ಲಿ ನೈಜತೆ ಇದೆ. ವಿವಿಧ ವಿಷಯಗಳ ಬಗೆಗಿನ ಅವರ ಬರವಣಿಗೆ ನಮ್ಮನ್ನು ಸೆಳೆದುಕೊಳ್ಳುತ್ತಿತ್ತು. ಚಿಕ್ಕಂ ದಿನಲ್ಲಿ ಅವರ ಸಣ್ಣಕಥೆಗಳನ್ನು ಓದಿ ಬೆಳೆದ ನನಗೆ ಇಂದು ಅವರ ಹೆಸರಿನ ಪ್ರಶಸ್ತಿ ಸಂದಿರುವುದು ಸಂತೋಷ ತಂದಿದೆ’ ಎಂದರು.

ನಂತರ ನಡೆದ ‘ಸಾವಿತ್ರಮ್ಮನವರ ಬರಹ ಪ್ರಪಂಚದ ಮರು ಅನು ಸಂಧಾನ’ ವಿಷಯ ಕುರಿತ ವಿಚಾರ ಸಂ ಕಿರಣದಲ್ಲಿ ಲೇಖಕಿಯರಾದ ಡಾ.ಬಿ.ಎನ್‌.ಸುಮಿತ್ರಾಬಾಯಿ, ಡಾ. ಎನ್‌.ಗಾಯಿತ್ರಿ ಮತ್ತಿತರರು ಮಾತ ನಾಡಿದರು. ‘ಎಚ್‌.ವಿ.ಸಾವಿತ್ರಮ್ಮ ಪ್ರಶಸ್ತಿ’ಯ ಮೊತ್ತ ₨ 25 ಸಾವಿರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.