ADVERTISEMENT

ಕಮಿಷನ್ ಪಡೆಯಲು ಯತ್ನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:25 IST
Last Updated 4 ಜೂನ್ 2011, 19:25 IST

ಬೆಂಗಳೂರು: ಹೈದರಾಬಾದ್ ಮೂಲದ ಪವರಾನಿಕ್ಸ್ ಎಂಬ ಕಂಪೆನಿಗೆ ರಾಜ್ಯದ ಇಂಧನ ಇಲಾಖೆಯಿಂದ ಬರಬೇಕಿದ್ದ ಬಾಕಿ ಹಣ 17 ಕೋಟಿ ರೂಪಾಯಿ ಕೊಡಿಸುತ್ತೇವೆ ಎಂದು ಹೇಳಿ ಕಮಿಷನ್ ಪಡೆಯಲು ಯತ್ನಿಸಿದ ಖಾಸಗಿ ವಾಹಿನಿಯೊಂದರ ವ್ಯವಸ್ಥಾಪಕ ಸೇರಿದಂತೆ ಇಬ್ಬರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ನರಸಿಂಹ ಚೌಧರಿ ಮತ್ತು ನಗರದ ಖಾಸಗಿ ವಾಹಿನಿಯ ವ್ಯವಸ್ಥಾಪಕ ಮನೋಜ್ ಬಂಧಿತರು. ಪ್ರಕರಣದ ಇತರೆ ಆರೋಪಿಗಳಾದ ಖಾಸಗಿ ವಾಹಿನಿಯ ಹಿರಿಯ ವರದಿಗಾರ ಚಂದ್ರಶೇಖರ್ ಮತ್ತು ದೇವಿಪ್ರಸಾದ್ ರೈ ಎಂಬುವರ ವಿರುದ್ಧವೂ ವಂಚನೆ ಪ್ರಕರಣ ದಾಖಲಾಗಿದೆ.

ರಾಷ್ಟೀಯ ಮಟ್ಟದ ಆಂಗ್ಲ ಪತ್ರಿಕೆಯೊಂದರ ಹಿರಿಯ ಪತ್ರಕರ್ತರೂ ಬಾಕಿ ಮೊತ್ತ ಪಾವತಿ ಮಾಡುವಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಮೇಲೆ ಒತ್ತಡ ಹೇರಿದ್ದರು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಪವರಾನಿಕ್ಸ್ ಕಂಪೆನಿಯು ಬೆಸ್ಕಾಂ ಹಾಗೂ ಇನ್ನಿತರ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ವಿದ್ಯುತ್ ಪೂರೈಕೆ ಮಾಡಿತ್ತು. ಇದರ ಬಾಕಿ ಮೊತ್ತ 17 ಕೋಟಿ ರೂಪಾಯಿ ಕಂಪೆನಿಗೆ ಬರಬೇಕಿತ್ತು. ನರಸಿಂಹ ಚೌಧರಿ ಎಂಬುವರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಎಂಬುವರನ್ನು ಭೇಟಿ ಮಾಡಿ ಶೇ 10ರಷ್ಟು ಕಮಿಷನ್ ನೀಡಿದರೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಿಸಿಕೊಡುವುದಾಗಿ ಹೇಳಿದ್ದರು. ಇದಕ್ಕೆ ಪ್ರಸಾದ್ ಸಹ ಒಪ್ಪಿದ್ದರು.

ಮನೋಜ್, ಚಂದ್ರಶೇಖರ್, ದೇವಿ ಪ್ರಸಾದ್ ಹಾಗೂ ಚೌಧರಿ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಬಾಕಿ ಹಣ ಬಿಡುಗಡೆಗೆ ಒತ್ತಡ ಹೇರಿದ್ದರು. ಆದರೂ ಹಣ ಬಿಡುಗಡೆಯಾಗಿರಲಿಲ್ಲ.
ಇದೇ ವೇಳೆ ಕಂಪೆನಿಯೂ ಬಾಕಿ ಮೊತ್ತ ಪಡೆಯುವ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ನ್ಯಾಯಾಲಯ ಸಹ ಹಣ ನೀಡುವಂತೆ ಆದೇಶ ನೀಡಿತ್ತು. ಆ ನಂತರ 17 ಕೋಟಿ ರೂಪಾಯಿಯನ್ನು ಕಂಪೆನಿಗೆ ಇಂಧನ ಇಲಾಖೆ ಸಂದಾಯ ಮಾಡಿತ್ತು.

ನ್ಯಾಯಾಲಯದ ಆದೇಶದ ಬಗ್ಗೆ ಮಾಹಿತಿ ಇಲ್ಲದ ಆರೋಪಿಗಳು, ಪ್ರಸಾದ್ ಅವರನ್ನು ಸಂಪರ್ಕಿಸಿ `ನಾವೇ ಹಣ ಬಿಡುಗಡೆ ಮಾಡಿಸಿದ್ದೇವೆ, ಆದ್ದರಿಂದ ಕಮಿಷನ್ ಹಣ ಕೊಡಿ~ ಎಂದು ಕೇಳಿದ್ದರು. ಈ ಹಣವನ್ನು ಕರಂದ್ಲಾಜೆ ಅವರ ನಿಕಟವರ್ತಿಗೆ ನೀಡಬೇಕಾಗಿದೆ ಎಂದೂ ಅವರು ಸುಳ್ಳು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಅನುಮಾನಗೊಂಡ ಪ್ರಸಾದ್ ಅವರು ಶೋಭಾ ಅವರನ್ನೇ ಸಂಪರ್ಕಿಸಿ ಈ ವಿಷಯ ತಿಳಿಸಿದ್ದರು. ಶೋಭಾ ಅವರು ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಯ ಗಮನಕ್ಕೆ ತಂದಿದ್ದರು. ಹಣ ನೀಡುವುದಾಗಿ  ಕಂಪೆನಿ ಅಧಿಕಾರಿಗಳಿಂದ ಹೇಳಿಸಿದ ಪೊಲೀಸರು ಆರೋಪಿಗಳನ್ನು ಬರುವಂತೆ ಹೇಳಿದ್ದರು.
ಹಣ ಪಡೆಯಲು ಶುಕ್ರವಾರ ಬಂದಿದ್ದ ನರಸಿಂಹ ಚೌಧರಿ ಮತ್ತು ಮನೋಜ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರಿಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.