ADVERTISEMENT

ಕಮ್ಮಟಿಗನ ನೆನಪಿನಲ್ಲಿ ಕಾಮತರ ಗುಣಗಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST
ಕಮ್ಮಟಿಗನ ನೆನಪಿನಲ್ಲಿ ಕಾಮತರ ಗುಣಗಾನ
ಕಮ್ಮಟಿಗನ ನೆನಪಿನಲ್ಲಿ ಕಾಮತರ ಗುಣಗಾನ   

ಬೆಂಗಳೂರು: `ಅಪರೂಪದ ಛಾಯಾಗ್ರಾಹಕ ಮತ್ತು ಚಿತ್ರಕಲಾವಿದರಾಗಿದ್ದ ಕೃಷ್ಣಾನಂದ ಕಾಮತರ ಜೀವನ ಮತ್ತು ವ್ಯಕ್ತಿತ್ವ ಮಾದರಿಯಾದುದು~ ಎಂದು ಲೇಖಕ ಡಾ.ಶೇಷಶಾಸ್ತ್ರಿ ಹೇಳಿದರು.

ಡಾ.ಕೃಷ್ಣಾನಂದ ಕಾಮತ ಪ್ರತಿಷ್ಠಾನವು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ `ಕಮ್ಮಟಿಗನ ನೆನಪಿನಲ್ಲಿ~ ಕಾಮತರ ಬದುಕು ಸಾಧನೆ, ವಿಚಾರ ಮಂಥನ, ಛಾಯಾ, ರೇಖಾಚಿತ್ರ ಪ್ರದರ್ಶನ ಮತ್ತು ಯುವ ಪತ್ರಿಕಾ ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಡಾ.ಕೃಷ್ಣಾನಂದ ಕಾಮತರು ಅಪೂರ್ವ ಪ್ರತಿಭೆಯಾಗಿದ್ದರು. ಸಂಶೋಧಕ, ಸೃಜನಶೀಲ ಬರಹಗಾರ, ಕುಂಚ ಕಲಾವಿದ, ಛಾಯಾಗ್ರಾಹಕ, ಪ್ರಾಣಿ-ಪಕ್ಷಿ ತಜ್ಞ, ವಿಜ್ಞಾನಿ ಹೀಗೆ ಅನೇಕ ವಿಶೇಷಣಗಳನ್ನು ಅವರು ಹೊಂದಿದ್ದರು. ಅವರ ಗುಣ ವಿಶೇಷಗಳನ್ನು ಪಟ್ಟಿ ಮಾಡುತ್ತ ಹೋದರೆ, ಅದು ಸಾಕಷ್ಟು ಬೆಳೆಯುತ್ತಾ ಹೋಗುತ್ತದೆ~ ಎಂದರು.

`ಕಾಮತರ ಬರಹಗಳನ್ನು ಪ್ರವಾಸ ಸಾಹಿತ್ಯ ಮತ್ತು ವೈಜ್ಞಾನಿಕ ಸಾಹಿತ್ಯ ಎಂದು ಎರಡು ವಿಭಾಗಗಳನ್ನಾಗಿ ವಿಂಗಡಿಸಬಹುದು. ಅವರ ಯಾವುದೇ ಒಂದು ಪ್ರವಾಸಕ್ಕೆ ಉದ್ದೇಶವಿರುತ್ತಿತ್ತು. ಅವರು ಕೈಗೊಂಡ ಪ್ರವಾಸವು ಅಧ್ಯಯನ ಛಾಯಾಗ್ರಹಣಕ್ಕೆ ಅನುಕೂಲಕರವಾಗಿರುತ್ತಿತ್ತು~ ಎಂದು ಹೇಳಿದರು.

`ಶಿಸ್ತು ಮತ್ತು ಅಚ್ಚುಕಟ್ಟುತನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಕಾಮತರು ಎಂದಿಗೂ ಅದನ್ನು ಬೇರೆಯವರ ಮೇಲೆ ಹೇರಲು ಪ್ರಯತ್ನ ಪಡಲಿಲ್ಲ. ಅವರು ಸರಳ ಜೀವಿ ಮತ್ತು ಮಿತವ್ಯಯಿಯಾಗಿದ್ದರು~ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, `ಕಾಮತರು ಪ್ರವಾಸ ಸಾಹಿತ್ಯಕ್ಕೆ ಹೊಸದಾದ ಹಲವು ಆಯಾಮವನ್ನು ನೀಡಿದರು. ಅವರು ಪ್ರಶಸ್ತಿಗಾಗಿ ಬರೆದವರಲ್ಲ. ಬದಲಾಗಿ ಅವರಿಗೆ ಬರಹ ಪ್ರೀತಿಯ ಹವ್ಯಾಸವಾಗಿತ್ತು~ ಎಂದರು.

`ಪತ್ನಿಯಲ್ಲಿ ಪ್ರೇಯಸಿಯನ್ನು ಕಲ್ಪಿಸಿಕೊಂಡು ಬರೆದಿರುವ ಅವರ ಪತ್ರ ಬರಹಗಳಲ್ಲಿ ಜೀವನದ ಗ್ರಹಿಕೆ ಮತ್ತು ಸೂಕ್ಷ್ಮ ಸಂವೇದನೆಯ ಗುಣಗಳಿವೆ. ಅವರ ಪ್ರತಿಯೊಂದು ಬರಹವೂ ಸಹ ಬದುಕಿನ ವೈಚಿತ್ರ್ಯಗಳನ್ನು ಬಿಚ್ಚಿಡುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು. ಕೃಷ್ಣಾನಂದ ಕಾಮತರು ಕ್ಕಿಕ್ಕಿಸಿದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.