ADVERTISEMENT

ಕರಾವಳಿಯಲ್ಲಿ ನಿರಂತರ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST

ಬೆಂಗಳೂರು: `ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಕರಾವಳಿ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ, ಮಾದಕ ವಸ್ತುಗಳ ಕಳ್ಳ ಸಾಗಣಿಕೆ ನಿಯಂತ್ರಿಸಲು ನಿರಂತರವಾಗಿ ಕಣ್ಗಾವಲು ನಡೆಸಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು.

ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, `ಕರಾವಳಿಯ ತೀರದಲ್ಲಿ ಮೊದಲ ಹಂತದಲ್ಲಿ ಕರಾವಳಿ ಕಾವಲು ಪಡೆಯ ಐದು ಠಾಣೆಗಳನ್ನು ಆರಂಭಿಸಲಾಗುವುದು. ಮುಂದಿನ ತಿಂಗಳಲ್ಲಿ ಈ ಠಾಣೆಗಳನ್ನು ಉದ್ಘಾಟಿಸಲಾಗುವುದು. ಎರಡನೇ ಹಂತದಲ್ಲಿ 4 ಠಾಣೆಗಳನ್ನು ತೆರೆಯಲಾಗುವುದು. ಮೊದಲ ಹಂತದಲ್ಲಿ 174 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಎರಡನೇ ಹಂತದಲ್ಲಿ 220 ಮಂದಿಯನ್ನು ನೇಮಕ ಮಾಡಲಾಗುವುದು~ ಎಂದು ತಿಳಿಸಿದರು.

`ರಾಜ್ಯಕ್ಕೆ 15 ಅತ್ಯಾಧುನಿಕ ದೋಣಿಗಳನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದೆ. ದ್ವಿತೀಯ ಹಂತದಲ್ಲಿ 12 ದೋಣಿಗಳು ಲಭ್ಯವಾಗುವ ವಿಶ್ವಾಸ ಇದೆ. ಸಿಬ್ಬಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗುವುದು. ಬೈನಾಕುಲರ್, ಸರ್ಚ್ ಲೈಟ್ ಖರೀದಿ ಹಾಗೂ ಮಾಹಿತಿ ಸಂಗ್ರಹಕ್ಕೆ ಪ್ರತಿ ಠಾಣೆಗೆ 15 ಲಕ್ಷ ರೂಪಾಯಿ ನೀಡಲಾಗುವುದು~ ಎಂದು ಅವರು ಮಾಹಿತಿ ನೀಡಿದರು.

`ಕರಾವಳಿ ಕಾವಲು ಪಡೆ ಮಾತ್ರವಲ್ಲದೆ ಸೇನೆ ಹಾಗೂ ನವಮಂಗಳೂರು ಬಂದರು ಮಂಡಳಿಯಿಂದ ಕಟ್ಟೆಚ್ಚರ ನಡೆಸಲಾಗುತ್ತಿದೆ. ಈ ಮೂರು ಅಂಗಗಳ ನಡುವೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ವರ್ಷಕ್ಕೆ ಎರಡು ಬಾರಿ ಜಂಟಿ ಅಣಕು ಕಾರ್ಯಾಚರಣೆ ನಡೆಸಲಾಗುವುದು. ಜುಲೈಯಲ್ಲಿ ಕರಾವಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತೇನೆ~ ಎಂದರು.

ನಕ್ಸಲ್ ನಿಗ್ರಹ ಪಡೆಗೆ ಯುವಕರ ನೇಮಕ: `ರಾಜ್ಯದಲ್ಲಿ ನಕ್ಸಲ್ ಹಾವಳಿ ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್)ಯನ್ನು ಬಲಪಡಿಸಿ ಯುವಕರ ನೇಮಕ ಮಾಡಲಾಗುವುದು. 40 ವರ್ಷ ದಾಟಿರುವ ಪೊಲೀಸ್ ಸಿಬ್ಬಂದಿಯನ್ನು ಎಎನ್‌ಎಫ್‌ನಿಂದ ಠಾಣೆಗೆ ವಾಪಸ್ ಕರೆಸಿಕೊಳ್ಳಲಾಗುವುದು. ಎಎನ್‌ಎಫ್ ಸಿಬ್ಬಂದಿಗೆ ವಿಶೇಷ ಭತ್ಯೆ ಹಾಗೂ ತರಬೇತಿ ನೀಡಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ~ ಎಂದು ಅವರು ಹೇಳಿದರು.

`ರಾಜ್ಯದಲ್ಲಿ 25 ಮಂದಿ ನಕ್ಸಲರು ಇದ್ದಾರೆ. ಅಲ್ಲಿ ಬೇರೆ ರಾಜ್ಯದಿಂದ ಬಂದಿರುವ ಬಾಡಿಗೆ ಬಂಟರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರದ ಪ್ಯಾಕೇಜ್ ಬಳಸಿಕೊಂಡು ನಕ್ಸಲರು ಶರಣಾಗಬೇಕು. ಇಲ್ಲದಿದ್ದರೆ ಗನ್ ಮೂಲಕವೇ ಉತ್ತರ ನೀಡಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.