ಬೆಂಗಳೂರು: ನಗರದ ಹಲವೆಡೆ ಕಲಬೆರಕೆ ಹಾಲು ಮಾರುತ್ತಿದ್ದ ಆರೋಪಿಗಳ ಜಾಲವನ್ನು ಭೇದಿಸಿರುವ ಕಲಾಸಿಪಾಳ್ಯ ಪೊಲೀಸರು ಏಳು ಮಂದಿಯನ್ನು ಬಂಧಿಸಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಕಲಬೆರಕೆ ಹಾಲನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಟಿ.ವೆಂಕಟಾಚಲಪತಿ (41), ಮುತ್ತುಸ್ವಾಮಿ (69), ಎಸ್.ಶೇಖರನ್ (49), ಶಂಕರ್ (29), ವಡಿವೇಲು (47), ಶೇಖರನ್ (53) ಮತ್ತು ಪಳನಿವೇಲು (45) ಬಂಧಿತರು. ಆರೋಪಿಗಳಿಂದ 10,640 ಲೀಟರ್ ಕಲಬೆರಕೆ ಹಾಲು, ಕೃತ್ಯಕ್ಕೆ ಬಳಸುತ್ತಿದ್ದ ನಾಲ್ಕು ಲಾರಿ ಹಾಗೂ ಕ್ಯಾನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ತಮಿಳುನಾಡಿನ ಈರೋಡ್ ಸಮೀಪ ಡೇರಿ ನಡೆಸುತ್ತಿದ್ದ ಆರೋಪಿಗಳು ಸುತ್ತಮುತ್ತಲ ಹಳ್ಳಿಗಳ ರೈತರಿಂದ ಹಾಲು ಖರೀದಿಸುತ್ತಿದ್ದರು. ನಂತರ ಆ ಹಾಲಿಗೆ ಕಾಸ್ಟಿಕ್ ಸೋಡಾ, ಸಕ್ಕರೆ ಮತ್ತು ಕೆಲ ರಾಸಾಯನಿಕ ವಸ್ತುಗಳನ್ನು ಬೆರೆಸಿ ನಗರಕ್ಕೆ ತಂದು ಮಾರುತ್ತಿದ್ದರು. ಅವರು ನಗರದ ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಗಾಂಧಿನಗರ, ಸಿದ್ದಯ್ಯ ರಸ್ತೆ ಸುತ್ತಮುತ್ತಲಿನ ಹೋಟೆಲ್‌ಗಳು ಹಾಗೂ ಸಗಟು ವ್ಯಾಪಾರಿಗಳಿಗೆ ಹಾಲು ಸರಬರಾಜು ಮಾಡುತ್ತಿದ್ದರು. ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ನಗರದಲ್ಲಿ ಪ್ರತಿನಿತ್ಯ 10ರಿಂದ 15 ಸಾವಿರ ಲೀಟರ್ ಕಲಬೆರಕೆ ಹಾಲು ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಕಲಾಸಿಪಾಳ್ಯ ಸಮೀಪ ಭಾನುವಾರ ನಸುಕಿನಲ್ಲಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ಹಾಲು ಮಾರಾಟಕ್ಕೆ ಸರ್ಕಾರದಿಂದ ಪರವಾನಗಿ ಪಡೆದಿರಲಿಲ್ಲ. ಹಾನಿಕಾರಕವಾದ ಈ ಹಾಲನ್ನು ಬಳಸಿದರೆ ಮನುಷ್ಯನ ರಕ್ತದೊತ್ತಡ ಮತ್ತು ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣದಲ್ಲಿ ಏರಿಳಿತವಾಗುತ್ತದೆ.
ಹಾನಿಕಾರಕವಾದ ಈ ಹಾಲನ್ನು ಬಳಸಿದರೆ ಮನುಷ್ಯನ ರಕ್ತದೊತ್ತಡ ಮತ್ತು ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣದಲ್ಲಿ ಏರಿಳಿತವಾಗುತ್ತದೆ.ಹಾಲಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಿಗದಿಪಡಿಸಿರುವ ಕೊಬ್ಬಿನ ಅಂಶದ ಪ್ರಮಾಣ ಮತ್ತು ಎಸ್‌ಎನ್‌ಎಫ್ ಗುಣಮಟ್ಟವನ್ನು ಆರೋಪಿಗಳು ಪಾಲನೆ ಮಾಡುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
`ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 272 (ಆಹಾರ ಅಥವಾ ಪಾನೀಯ ಕಲಬೆರಕೆ), 273 (ಹಾನಿಕಾರಕ ಆಹಾರ ಪದಾರ್ಥಗಳ ಮಾರಾಟ) ಹಾಗೂ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪ್ರಕರಣದ ಇತರೆ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.
ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ, ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಜಿ.ಬಿ.ಕೌರಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.