ADVERTISEMENT

ಕಲ್ಕೆರೆ ಕೆರೆ ಅಂಗಳದಲ್ಲಿ ವಿಶ್ವ ಭೂಮಿ ದಿನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 18:53 IST
Last Updated 22 ಏಪ್ರಿಲ್ 2018, 18:53 IST
ನಿವಾಸಿಗಳು ಕೆರೆ ಅಂಗಳವನ್ನು ಸ್ವಚ್ಛಗೊಳಿಸಿದರು
ನಿವಾಸಿಗಳು ಕೆರೆ ಅಂಗಳವನ್ನು ಸ್ವಚ್ಛಗೊಳಿಸಿದರು   

ಬೆಂಗಳೂರು: ಕೆ.ಆರ್.ಪುರ ಬಳಿಯ ಕಲ್ಕೆರೆ ಕೆರೆ ಅಂಗಳವನ್ನು ಸ್ವಚ್ಛಗೊಳಿಸುವ ಮೂಲಕ ಸ್ಥಳೀಯರು ಭಾನವಾರ ವಿಶ್ವ ಭೂ ದಿನ ಆಚರಿಸಿದರು.

ಬೆಳಿಗ್ಗೆಯೇ ಕಲ್ಕೆರೆ ನಿವಾಸಿಗಳ ಸಂಘದವರು ಕೆರೆ ಬಳಿ ಸೇರಿದ್ದರು. ಕೆರೆಯ ದಡದಲ್ಲಿ ಹಸಿರು ಬಾವುಟ ಹಾರಿಸಿ‌ ಸ್ವಚ್ಛತೆ ಕೆಲಸದಲ್ಲಿ ತಲ್ಲೀನರಾಗಿದ್ದರು. 2 ಕಿ.ಮೀ. ವ್ಯಾಪ್ತಿಯ ಕೆರೆ ಪಥದಲ್ಲಿ ವಿಹರಿಸಿ ಕಸ ಸಂಗ್ರಹಿಸಿದರು.

ಮಕ್ಕಳೂ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು. ‘ಕೆರೆಯ ಅಂಚಿನ ಅಪಾರ್ಟ್‌ಮೆಂಟ್‌ ಸಮುಚ್ಚಯದ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಕೆರೆಗೆ ತಂದು ಸುರಿಯಲಾಗುತ್ತಿದೆ. ಇದನ್ನು ತಡೆಯುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳು ತಿಳಿಸಿದರು.

ADVERTISEMENT

186 ಎಕರೆ ವಿಸ್ತೀರ್ಣ ಹೊಂದಿರುವ ಕಲ್ಕೆರೆ ಕೆರೆ ಸಂಪೂರ್ಣ ಮಲಿನಗೊಂಡಿದೆ. ಹೊರಮಾವು, ಹೆಬ್ಬಾಳ ಮತ್ತು ನಾಗವಾರ ಕಡೆಯಿಂದ ಬರುವ ರಾಜಕಾಲುವೆ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಕನಕಶ್ರೀ ಬಡಾವಣೆ ಮತ್ತು ಹೊರಮಾವು ಭಾಗಗಳಲ್ಲಿ ಕೆರೆಗೆ ಪ್ರವೇಶ ದ್ವಾರಗಳಿದ್ದು, ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗಿದೆ ಎಂದು ಸಮಸ್ಯೆಗಳನ್ನು ವಿವರಿಸಿದರು.

ಕೆರೆ ಪ್ರದೇಶ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಬಿಯರ್ ಬಾಟಲ್‌ಗಳನ್ನು ಎಸೆದಿರುತ್ತಾರೆ. ರಾತ್ರಿ ವೇಳೆಯಲ್ಲಿ ಭದ್ರತೆ ಹೆಚ್ಚಿಸುವಂತೆ ಕೋರಿ ಕೊತ್ತನೂರು ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕಲ್ಕೆರೆ ಕೆರೆ ರಕ್ಷಿಸಿ ಅಭಿಯಾನದ ಸಂಚಾಲಕಿ ಸುಭದ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.