ADVERTISEMENT

ಕಸಾಪ ಅಧ್ಯಕ್ಷರ ಅಧಿಕಾರ ವಿಸ್ತರಣೆ ಬೇಡ

ಮನು ಬಳಿಗಾರ್ ವಿರುದ್ಧ ಸಮಾನ ಮನಸ್ಕರ ಕಿಡಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:40 IST
Last Updated 9 ಮಾರ್ಚ್ 2018, 19:40 IST
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಯಿತು. –ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಯಿತು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಅಧಿಕಾರವನ್ನು ಐದು ವರ್ಷಕ್ಕೆ ವಿಸ್ತರಿಸಬಾರದು ಎಂದು ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಧಿಕಾರಾವಧಿ ವಿಸ್ತರಣೆ ಬಗ್ಗೆ ಹಾಗೂ ಅದನ್ನು ಈಗಿನ ಸಮಿತಿಗೆ ಅನ್ವಯಿಸುವಂತೆ ಕ್ರಮಕೈಗೊಳ್ಳಲು ಉಡುಪಿಯ ಕೋಟದಲ್ಲಿ ಇದೇ 15ರಂದು ಕರೆದಿರುವ ವಿಶೇಷ ಸರ್ವ ಸದಸ್ಯರ ಸಭೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದತ್ತಿ ಪ್ರಶಸ್ತಿ ನೀಡಿದ್ದು ಹಾಗೂ ಸಾಹಿತ್ಯ ಸಮ್ಮೇಳನ ಮಾಡಿದ್ದನ್ನು ಹೊರತುಪಡಿಸಿ ಬೇರೆ ಕೆಲಸಗಳನ್ನು ಮನು ಬಳಿಗಾರ್‌ ಮಾಡಿಲ್ಲ. ಅವರಿಗೆ ಅಧಿಕಾರ ದಾಹ ಹೆಚ್ಚಾಗಿದೆ ಎಂದು ದೂರಿದರು.

ADVERTISEMENT

ಚಿಂತಕ ಪುಸ್ತಕಮನೆ ಹರಿಹರಪ್ರಿಯ, ‘ಪರಿಷತ್ತಿನ ಅಧ್ಯಕ್ಷ ಕುರ್ಚಿಯು ನಿವೃತ್ತ ಸರ್ಕಾರಿ ಅಧಿಕಾರಿಗಳು ಮುದುಕರಾಗುವವರೆಗೆ ಕೂರುವ ಕುರ್ಚಿಯಲ್ಲ. ಅದು ಕನ್ನಡಪರ ಕೆಲಸ ಹಾಗೂ ಸೇವೆ ಮಾಡುವವರಿಗೆ ಮಾತ್ರ ಸೀಮಿತ. ಆದರೆ, ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಅವರು ಹೇಳಿದರು.

ಕಸಾಪ ಬಡವಾಗಿದ್ದಾಗ ಎಲ್ಲರೂ ಅದರಿಂದ ದೂರ ಇದ್ದರು. ಶ್ರೀಮಂತವಾದ ಕೂಡಲೇ ಎಲ್ಲರೂ ಅದನ್ನು ಅಪ್ಪಿಕೊಳ್ಳಲು ಮುಂದಾಗಿದ್ದರೆ. ಬಳಿಗಾರ್ ಮಾಡುತ್ತಿರುವುದೂ ಅದೇ ಕೆಲಸ. ಐಶ್ವರ್ಯಕ್ಕೆ ಬೆಲೆ ನೀಡಿ ಅಧಿಕಾರ ಹಿಡಿಯಲು ಮುಂದಾಗುವವರಿಗೆ ಅವಕಾಶವೇ ನೀಡಬಾರದು ಎಂದರು.

ಕಸಾಪದ ಅತಿ ಹೆಚ್ಚು ಸದಸ್ಯರು ನಗರದಲ್ಲಿ ಇದ್ದಾರೆ. ವಿಶೇಷ ಸರ್ವ ಸದಸ್ಯರ ಸಭೆಯನ್ನು ಇಲ್ಲಿಯೇ ನಡೆಸಲಿ. ಅಧಿಕಾರ ವಿಸ್ತರಣೆ ಹೊರತುಪಡಿಸಿ ಬೇರೆ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಿ ಎಂದರು.

ಸಮಾನ ಮಸ್ಕರ ವೇದಿಕೆಯ ಸಂಚಾಲಕರಾದ ರಾಮಣ್ಣ ಎಚ್.ಕೋಡಿಹೊಸಹಳ್ಳಿ, ಲಕ್ಷ್ಮಣ ಕೊಡಸೆ ಇದ್ದರು.

‘ಸಭೆ ರದ್ದುಗೊಳಿಸಿದರೆ ₹ 19.5 ಲಕ್ಷ ನಷ್ಟ’
ಸರ್ವಸದಸ್ಯರ ವಿಶೇಷ ಸಭೆ ರದ್ದುಪಡಿಸಿದರೆ ₹19.5 ಲಕ್ಷ ನಷ್ಟವಾಗುತ್ತದೆ. ಹೀಗಾಗಿ, ಸಭೆಯ ಸ್ಥಳ ಬದಲಾವಣೆ ಮಾಡುವುದು ಸಮಂಜಸವಲ್ಲ ಎಂದು ಮನು ಬಳಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2016ರ ಮೇ ತಿಂಗಳಿನಲ್ಲಿ ಕಾನೂನುತಜ್ಞರು ಹಾಗೂ ಆಡಳಿತಾತ್ಮಕ ಪರಿಣತರ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಅದರ ಪ್ರಕಾರ ಕಾರ್ಯಕಾರಿ ಸಮಿತಿಯು ತಿದ್ದುಪಡಿ ಮಾಡಲು ನಿರ್ಣಯ ಕೈಗೊಂಡಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಹಣದ ಅಪವ್ಯಯ ತಪ್ಪಿಸುವ ಹಾಗೂ ಪರಿಷತ್ತಿನ ಮತದಾರರಿಗೆ ಈವರೆಗೆ ಆಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

*
ಅಧಿಕಾರದಲ್ಲಿ ಮುಂದುವರೆಯಲು ಇಚ್ಛಿಸುವವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಲಿ.
–ಪುಸ್ತಕಮನೆ ಹರಿಹರಪ್ರಿಯ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.