ಹೊಸಕೋಟೆ: ಪುರಸಭೆ ಪಟ್ಟಣದಲ್ಲಿ ಸಂಗ್ರಹಿಸುವ ತ್ಯಾಜ್ಯ ವಸ್ತುಗಳನ್ನು ಇಲ್ಲಿಗೆ ಸಮೀಪದ ಕಲ್ಲಹಳ್ಳಿ ಬಳಿ ವಿಲೇವಾರಿ ಮಾಡಲು ಯತ್ನಿಸಿದಾಗ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪುರಸಭೆಯ ಮುಖ್ಯಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಪೊಲೀಸರ ಸಹಕಾರದೊಂದಿಗೆ ಎರಡು ಟ್ರ್ಯಾಕ್ಟರ್‌ಗಳಲ್ಲಿ ಕಸ ತುಂಬಿಕೊಂಡು ವಿಲೇವಾರಿ ಮಾಡಲು ಸ್ಥಳಕ್ಕೆ ತೆರಳಿದ್ದಾಗ ಗ್ರಾಮಸ್ಥರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಕೆಲಕಾಲ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಕಸ ವಿಲೇವಾರಿಗೆ ಮಂಜೂರಾದ ಜಾಗವನ್ನು ರದ್ದುಪಡಿಸಲು ಜಿಲ್ಲಾಧಿಕಾರಿ ಹಾಗೂ ಸಚಿವರು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ವಾದಿಸಿದರು. ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಪುರಸಭೆಯ ಆಡಳಿತ ವರ್ಗ, ಕಸ ವಿಲೇವಾರಿ ಮಾಡದೆ ಹಿಂತಿರುಗಿತು.
ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ.ರಮೇಶ್, ಭಾರತಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಟ್ಟಣದಲ್ಲಿ ಸಂಗ್ರಹಿಸುವ ಕಸ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಕಲ್ಲಹಳ್ಳಿ ಬಳಿ 12 ಎಕರೆ ಸರ್ಕಾರಿ ಜಾಗವನ್ನು 2004ರಲ್ಲಿ ಪುರಸಭೆಗೆ ಮಂಜೂರು ಮಾಡಿದ್ದರು. ಅಂದಿನಿಂದಲೇ ಗ್ರಾಮಸ್ಥರು ಇಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.