ADVERTISEMENT

ಕಾಡುವ ಕಾಡಾಪುರಕರ್ ಕಲಾಕೃತಿಗಳು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:56 IST
Last Updated 12 ಏಪ್ರಿಲ್ 2013, 19:56 IST

ಬೆಂಗಳೂರು: ಕರ್ನಾಟಕ ಲಲಿತಾ ಕಲಾ ಅಕಾಡೆಮಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರದಿಂದ ಏರ್ಪಡಿಸಿರುವ ಕಲಾವಿದ ದಿವಂಗತ ಅಪ್ಪಾಸಾಹೇಬ್ ಬಿ. ಸಾಲಿ ಕಾಡಾಪುರಕರ್ ಅವರ ಕಲಾಕೃತಿಗಳ ಪ್ರದರ್ಶನ ಅದ್ಭುತ ಲೋಕವನ್ನೇ ಸೃಷ್ಟಿ ಮಾಡಿದೆ. ಬಣ್ಣ, ಚಿನ್ನ, ಬೆಳ್ಳಿ, ಪಂಚಲೋಹ, ಕಲ್ಲು, ಮಣ್ಣು, ಕಟ್ಟಿಗೆ, ದವಸಧಾನ್ಯ ಮೊದಲಾದ ಪದಾರ್ಥ ಬಳಸಿ ಮಾಡಿದ ಆಕೃತಿಗಳು ತಟ್ಟನೆ ಗಮನ ಸೆಳೆಯುತ್ತವೆ.

ಆಹಾರ ಧಾನ್ಯಗಳು, ಗೋಧಿಕಡ್ಡಿ, ಖಾದಿ ಬಟ್ಟೆ, ಕರಿಮಣಿ ಮುಂತಾದ ವಸ್ತುಗಳಿಂದ `ಕೋಲಾಜ್' ತಂತ್ರದಲ್ಲಿ ಅಂಟಿಸಿ ಮಹಾತ್ಮ ಗಾಂಧಿ, ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಬಿಸ್ಮಿಲ್ಲಾ ಖಾನ್, ಸರ್ ಎಂ.ವಿಶ್ವೇಶ್ವರಯ್ಯ ಮುಂತಾದ ಮಹಾನ್ ಸಾಧಕರ ಭಾವಚಿತ್ರಗಳನ್ನು ಅಪ್ಪಾಸಾಹೇಬ್ ರಚಿಸಿದ್ದಾರೆ. ಪ್ರೀತಿ-ಪ್ರೇಮ, ಸ್ತ್ರೀ ಒಂಟಿತನ, ತಾಯಿ-ಮಕ್ಕಳ ಪ್ರೇಮ, ಸಮಾಜದ ಕಿರುಕುಳ ಹೀಗೆ ಸ್ತ್ರೀ ಸಂವೇದನೆಯನ್ನು ಸಾರುವ ಹಲವು ಕಲಾಕೃತಿಗಳು ಅಪ್ಪಸಾಹೇಬ್ ಅವರ ಸೃಜನಶೀಲ ಮನಸ್ಸನ್ನು ಪ್ರತಿಬಿಂಬಿಸುತ್ತವೆ.

ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಕಲಾ ಪ್ರದರ್ಶನವನ್ನು ಉದ್ಘಾಟಿಸಿ, `ಸಮಕಾಲೀನ ಚಿತ್ರಕಲೆಗಳಲ್ಲಿ ಅಪ್ಪಾಸಾಹೇಬ್ ಅವರ ಕಲೆ ವಿಶೇಷವಾಗಿದೆ. ಅವರು ನವ್ಯ ಮತ್ತು ನವ್ಯೋತ್ತರ ಶೈಲಿಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ಗಡಿನಾಡಿನಲ್ಲಿ ಹುಟ್ಟಿ, ಶಾಲಾ ಶಿಕ್ಷಣ ಪಡೆಯದೆ ಈ ಮಟ್ಟದ ಸಾಧನೆ ಮಾಡಿ, ಯುವಕರಿಗೆ ಮಾದರಿಯಾಗಿದ್ದಾರೆ' ಎಂದರು.

ಅಪ್ಪಾಸಾಹೇಬ್ ಅವರ ಪುತ್ರರಾದ ಉತ್ತಮ್‌ಕುಮಾರ್, ಚಕ್ರವರ್ತಿ, ಸೊಸೆ ಗಾಯತ್ರಿ, ಮೊಮ್ಮಕ್ಕಳಾದ ನಂದೀಶ್ ಚಕ್ರವರ್ತಿ, ಅನಂತ ಅವರು ತಯಾರಿಸಿದ ಕಲಾಕೃತಿಗಳು ಕಲಾ ಪ್ರದರ್ಶನದ ಮೆರುಗನ್ನು ಹೆಚ್ಚಿಸಿದ್ದು, ಏಪ್ರಿಲ್18ರ ತನಕ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.