ADVERTISEMENT

ಕಾನೂನು ಪ್ರವೇಶ ಪರೀಕ್ಷೆ: ರಾಜ್ಯದ ಮೂವರಿಗೆ 100ರೊಳಗೆ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

ಬೆಂಗಳೂರು: ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಫಲಿತಾಂಶ ಗುರುವಾರ ಪ್ರಕಟವಾಗಿದೆ.

ಮೇ 13ರಂದು 63 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 59,000 ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದ ಮೂವರು ವಿದ್ಯಾರ್ಥಿಗಳು ಮೊದಲ 100 ರ‍್ಯಾಂಕ್‌ ಒಳಗೆ ಸ್ಥಾನ ಪಡೆದಿದ್ದಾರೆ.

ಭಗವಾನ್ ಮಹಾವೀರ್ ಜೈನ್‌ ಕಾಲೇಜಿನ ವಿದ್ಯಾರ್ಥಿ ಎಂ.ವಿ. ಅನಘಾ ಅಖಿಲ ಭಾರತೀಯ ಮಟ್ಟದಲ್ಲಿ 22ನೇ ರ‌್ಯಾಂಕ್‌ ಗಳಿಸುವ ಮೂಲಕ, ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶ್ರೇಯಕ್ಕೆ ಭಾಜನರಾಗಿದ್ದಾರೆ. ಎರಡನೇ ಬಾರಿ ಪರೀಕ್ಷೆ ಬರೆದಿರುವ ಇವರು ಕಳೆದ ಬಾರಿ 900ನೇ ರ‍್ಯಾಂಕ್‌ ಪಡೆದಿದ್ದರು.

ADVERTISEMENT

ಡೆಲ್ಲಿ ಪಬ್ಲಿಕ್‌ ಶಾಲೆಯ (ಉತ್ತರ) ವಾಣಿಜ್ಯ ವಿದ್ಯಾರ್ಥಿ ಶಶಾಂಕ ತೇಜಸ್ವಿ 31ನೇ ರ‍್ಯಾಂಕ್‌ ಗಳಿಸಿದ್ದಾರೆ. ಆನ್‌ಲೈನ್ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು, ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ವಿದ್ಯಾಮಂದಿರ ಪಿಯು ಕಾಲೇಜಿನ ಕಾರ್ತಿಕ್ ರೈ 53ನೇ ರ‍್ಯಾಂಕ್ ಪಡೆದಿದ್ದಾರೆ. ದೇಶದಾದ್ಯಂತ ಪ್ರಥಮ ಮೂರು ರ‍್ಯಾಂಕ್‌ಗಳು ಜೈಪುರದ ಪಾಲಾಗಿವೆ.

ಕೊಚ್ಚಿಯಲ್ಲಿರುವ ನ್ಯಾಷನಲ್ ಯೂನಿವರ್ಸಿಟಿ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್ ಈ ವರ್ಷ ಪರೀಕ್ಷೆ ನಡೆಸಿತ್ತು. ದೇಶದ 19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಂದ ಈ ವರ್ಷ 2,340 ಸೀಟುಗಳು ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.