ಬೆಂಗಳೂರು: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿ, ಆತನ ಸ್ನೇಹಿತ ಗಾಯಗೊಂಡಿರುವ ಘಟನೆ ಕನಕಪುರ ಮುಖ್ಯರಸ್ತೆಯ ಜರಗನಹಳ್ಳಿ ಗೇಟ್ ಸಮೀಪ ಶನಿವಾರ ರಾತ್ರಿ ನಡೆದಿದೆ.
ಜೆ.ಪಿ.ನಗರ ಬಳಿಯ ಶಿವಶಕ್ತಿನಗರ ನಿವಾಸಿ ಹರೀಶ್ (22) ಮೃತಪಟ್ಟವರು. ಬನಶಂಕರಿಯ ಬಿಎನ್‌ಎಂ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಅವರು, ರಾತ್ರಿ ವೇಳೆ ಸಾರಕ್ಕಿ ಸಮೀಪದ ಕಾಲ್‌ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದ್ಯೋಗಿ ಮತ್ತು ಸಹಪಾಠಿ ಯಶವಂತ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅವರಿಬ್ಬರೂ ಕೆಲಸ ಮುಗಿಸಿಕೊಂಡು ಕಂಪೆನಿಯಿಂದ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಕಾರು ಚಾಲಕ ಮಲ್ಲಿಕಾರ್ಜುನ್, ಜರಗನಹಳ್ಳಿ ಗೇಟ್ ಸಮೀಪ `ಯು~ ತಿರುವು ಪಡೆದುಕೊಳ್ಳುವ ಯತ್ನದಲ್ಲಿ ಅವರ ಬೈಕ್‌ಗೆ ಹಿಂದಿನಿಂದ ವಾಹನ ಗುದ್ದಿಸಿದ್ದಾನೆ. ಇದರಿಂದ ಅಡ್ಡಾದಿಡ್ಡಿ ಚಲಿಸಿದ ಬೈಕ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿ ಅವರಿಬ್ಬರೂ ಕೆಳಗೆ ಬಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡ ಹರೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿದ್ದರಿಂದ ಆತಂಕಗೊಂಡ ಮಲ್ಲಿಕಾರ್ಜುನ್, ಹರೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದರು. ಆದರೆ, ಹರೀಶ್ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿದರು. ಇದರಿಂದ ಗಾಬರಿಯಾದ ಮಲ್ಲಿಕಾರ್ಜುನ್, ಶವವನ್ನು ಕಾರಿನಲ್ಲೇ ಜೆ.ಪಿ.ನಗರ ಆರನೇ ಹಂತದ ಒಂಬತ್ತನೇ ಅಡ್ಡರಸ್ತೆಗೆ ಸಾಗಿಸಿ ಮೋರಿಯೊಂದಕ್ಕೆ ಎಸೆದು ಮತ್ತು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಯಶವಂತ್ ಅವರನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದ ಸಾವು: `ಮಗನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ. ಆತನ ಸಾವಿನ ಬಗ್ಗೆ ಅನುಮಾನವಿದೆ~ ಎಂದು ಹರೀಶ್ ತಂದೆ ರಾಮಣ್ಣ ಅವರು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜೆ.ಪಿ.ನಗರ ಪೊಲೀಸರು ಹೇಳಿದ್ದಾರೆ.
ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯದಲ್ಲಿ (ಕಿಮ್ಸ) ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.