ADVERTISEMENT

ಕಾರ್ಪೊರೇಟ್ ವಂಚನೆ ನಿಯಂತ್ರಣಕ್ಕೆ ತನಿಖಾ ಕಚೇರಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:45 IST
Last Updated 29 ಜೂನ್ 2012, 19:45 IST
ಕಾರ್ಪೊರೇಟ್ ವಂಚನೆ ನಿಯಂತ್ರಣಕ್ಕೆ ತನಿಖಾ ಕಚೇರಿ
ಕಾರ್ಪೊರೇಟ್ ವಂಚನೆ ನಿಯಂತ್ರಣಕ್ಕೆ ತನಿಖಾ ಕಚೇರಿ   

ಬೆಂಗಳೂರು: `ಮುಂದಿನ ಮಳೆಗಾಲದ ಅಧಿವೇಶನದ ನಂತರ `ಹೊಸ ಕಂಪೆನಿ ಕಾಯ್ದೆ-2011~ ಜಾರಿಗೆ ಬರಲಿದೆ~ ಎಂದು ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಸಂಘಟನೆ (ಅಸೋಚಂ) ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ದೇಶದ ಕಾರ್ಪೊರೇಟ್ ವ್ಯವಹಾರಗಳಲ್ಲಿ ವಂಚನೆ ನಿಯಂತ್ರಣ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದಲ್ಲಿ 1991ರ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳ ನಂತರ ಸಮರ್ಪಕವಾದ ಕಂಪೆನಿ ಕಾನೂನುಗಳು ಜಾರಿಗೆ ಬಂದಿಲ್ಲ. 1956ರ ಕಂಪೆನಿ ಕಾಯ್ದೆಯು ಹಳೆಯದಾಗಿದೆ. ಹೊಸ ಕಂಪೆನಿ ಕಾಯ್ದೆ-2011 ಅನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು~ ಎಂದರು.

`ಕಾರ್ಪೊರೇಟ್ ಕಂಪೆನಿಗಳ ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಸಚಿವಾಲಯದಿಂದ ಗಂಭೀರ ವಂಚನೆಗಳ ತನಿಖಾ ಕಚೇರಿಯನ್ನು ಸ್ಥಾಪಿಸಲಾಗಿದೆ. ಇದಕ್ಕೆ ಕಾರ್ಪೊರೇಟ್ ವ್ಯವಹಾರಗಳ ತಜ್ಞರನ್ನು ನೇಮಿಸುವ ಮೂಲಕ ಹೆಚ್ಚಿನ ಬಲ ನೀಡಲಾಗುವುದು. ದೊಡ್ಡ ಮಟ್ಟದಲ್ಲಿ ನಡೆಯುವ ವಂಚನೆಯ ಬಗ್ಗೆ ನಿಗಾ ವಹಿಸಲು ಉದ್ಯಮಿ ಆದಿ ಗೋದ್ರೇಜ್ ನೇತೃತ್ವದ ಸಮಿತಿಯನ್ನು ನೇಮಿಸಲಾಗಿದೆ~ ಎಂದು ಅವರು ಹೇಳಿದರು.

`ಕಾರ್ಪೊರೇಟ್ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅವ್ಯವಹಾರಗಳಿಂದಲೇ ಶೇ 89ರಷ್ಟು ವಂಚನೆಗಳು ನಡೆಯುತ್ತವೆ. ಕಂಪೆನಿ ವ್ಯವಹಾರದ ಆಂತರಿಕ ಲೆಕ್ಕಪತ್ರಗಳ ಅಸಮರ್ಪಕ ನಿರ್ವಹಣೆಯೂ ವಂಚನೆಯ ಒಂದು ಮಾರ್ಗ. ದೊಡ್ಡ ಮಟ್ಟದ ವಂಚನೆ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲೂ ಸರ್ಕಾರ ಅದನ್ನು ಸಮರ್ಪಕವಾಗಿ ನಿಭಾಯಿಸಿದೆ ಎಂಬುದಕ್ಕೆ ಸತ್ಯಂ ಕಂಪ್ಯೂಟರ್ ಹಗರಣವೇ ಒಂದು ಉತ್ತಮ ಉದಾಹರಣೆ.

ಸತ್ಯಂ ಪ್ರಕರಣದಲ್ಲಿ ಕಂಪೆನಿ ಮತ್ತು ಹೂಡಿಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಪ್ರಕರಣವನ್ನು ನಿಭಾಯಿಸಲಾಯಿತು~ ಎಂದರು.

ಮೌಲ್ಯಯುತ ವ್ಯವಹಾರ ಅಗತ್ಯ: `ದೇಶದ ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಮೌಲ್ಯಯುತ ವ್ಯವಹಾರದ ಅಗತ್ಯವಿದೆ. ಕಂಪೆನಿಗಳು ತಮ್ಮ ಆಂತರಿಕ ವ್ಯವಸ್ಥೆಯನ್ನು ಪಾರದರ್ಶಕವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರ್ಥಿಕ ವ್ಯವಸ್ಥೆಗೆ ತಮ್ಮ ಕಾಣಿಕೆ ನೀಡಬೇಕು. ಸಚಿವಾಲಯದಿಂದ ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಮನೋಭಾವದಲ್ಲಿ ಪರಿವರ್ತನೆಯಾಗದ ಹೊರತು ಯಾವುದೇ ಬದಲಾವಣೆ ಸಾಧ್ಯವಿಲ್ಲ~ ಎಂದು ತಿಳಿಸಿದರು.

ಪೂರಕ ವಾತಾವರಣ
ಬೆಂಗಳೂರು: `ಉದ್ದಿಮೆಗಳ ಸ್ಥಾಪನೆಗೆ ಬೆಂಗಳೂರು ಸೂಕ್ತ ಸ್ಥಳ ಎಂಬ ಮನೋಭಾವ ಉದ್ಯಮಿಗಳಲ್ಲಿದೆ~ ಎಂದು ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಆಯೋಜಿಸಿದ್ದ 35ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, `ನಾಲ್ಕೈದು ದಶಕಗಳ ಹಿಂದಿನಿಂದಲೂ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು ಒಲವು ತೋರುತ್ತಲೇ ಬಂದಿದ್ದಾರೆ. ಇಲ್ಲಿನ ಭೌಗೋಳಿಕ ವಾತಾವರಣವು ಉತ್ತಮವಾಗಿದೆ.

ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಉತ್ತಮ ಮೂಲ ಸೌಕರ್ಯಗಳನ್ನು ರಾಜ್ಯದಲ್ಲಿ ನೀಡುತ್ತಾ ಬರಲಾಗುತ್ತಿದೆ~ ಎಂದರು.

`ಆರ್ಥಿಕ ಬೆಳವಣಿಗೆಯಲ್ಲಿ ರಾಜಕೀಯ ಬೆರೆಸುವ ಕೆಲಸ ಆಗದಿದ್ದರೆ ಉದ್ಯಮಿಗಳು ಆ ರಾಜ್ಯಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒಲವು ತೋರುತ್ತಾರೆ ಎಂಬುದಕ್ಕೆ ರಾಜ್ಯವೇ ಒಂದು ಉತ್ತಮ ಉದಾಹರಣೆ~ ಎಂದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಂ.ಲಕ್ಷ್ಮೀನಾರಾಯಣ ಮಾತನಾಡಿ, `ರಾಜ್ಯದ 67 ಮಾರ್ಗಗಳ ಹತ್ತು ಸಾವಿರ ಕಿ.ಮೀ ಉದ್ದದ ರಸ್ತೆ ನಿರ್ಮಾಣವೂ ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆಗೆ ಅಪಾರವಾದ ಅವಕಾಶವಿದೆ~ ಎಂದರು. ಸಂಸ್ಥೆಯ ಅಧ್ಯಕ್ಷ ಡಾ.ವಿನೋದ್ ಕೆ. ನೊವಾಲ್, ಉಪಾಧ್ಯಕ್ಷ ಎಚ್.ವಿ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.