ADVERTISEMENT

ಕಾವೇರಿಯಿಂದಲೇ ಸ್ಮರಣಿಕೆ ಖರೀದಿ: ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 20:33 IST
Last Updated 30 ನವೆಂಬರ್ 2012, 20:33 IST

ಬೆಂಗಳೂರು: `ಸರ್ಕಾರದಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ  ನೀಡುವ ಸ್ಮರಣಿಕೆಗಳನ್ನು ಕಾವೇರಿ ಮಳಿಗೆಯಿಂದಲೇ ಕೊಂಡುಕೊಳ್ಳಬೇಕೆಂದು ಮನವಿ ಮಾಡಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ' ಎಂದು ಸಣ್ಣ ಕೈಗಾರಿಕಾ ಸಚಿವ ರಾಜುಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಜಯನಗರದಲ್ಲಿ ನೂತನವಾಗಿ ಆರಂಭಗೊಂಡ ಕಾವೇರಿ ಕರಕುಶಲ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

`ನಿಗಮದ ಅಭಿವೃದ್ಧಿಗಾಗಿ ಈಗಾಗಲೇ 5 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಕರಕುಶಲಕರ್ಮಿ ಗಳಿಗಾಗಿ ಉತ್ತಮ ಮಾರುಕಟ್ಟೆಯನ್ನು ಸೃಷ್ಟಿಸುವತ್ತ ಚಿಂತನೆ ನಡೆಸಬೇಕು' ಎಂದು ತಿಳಿಸಿದರು.

ADVERTISEMENT

`ನಿಗಮವು ಒಂದು ಕೋಟಿ ರೂಪಾಯಿಗಳಷ್ಟು ಕರಕುಶಲ ವಸ್ತುಗಳನ್ನು ರಫ್ತು ಮಾಡಿದ್ದು, 3.30 ಕೋಟಿಗಳಷ್ಟು ನಿವ್ವಳ ಲಾಭವನ್ನು ಗಳಿಸಿದೆ. ನಿಗಮದಲ್ಲಿ ಐದು ಸಾವಿರ ಕುಶಲಕರ್ಮಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಮೂವತ್ತು ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ನಿಗಮವನ್ನು ಅವಲಂಬಿಸಿದ್ದಾರೆ' ಎಂದು ತಿಳಿಸಿದರು.

ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, `ನಿಗಮವು ದೇಶದ ವಿವಿಧ ಭಾಗಗಳಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಹಾಗೂ ಕುಶಲಕಲಾ ಕೇಂದ್ರಗಳಿಗೆ ಕಲಾವಿದರನ್ನು ಕರೆದೊಯ್ದು ಕುಶಲತೆಯ ಬಗ್ಗೆ ಹೆಚ್ಚಿನ ತರಬೇತಿಯನ್ನು ನೀಡುತ್ತಿದೆ' ಎಂದು ತಿಳಿಸಿದರು.

`ನೋಂದಾಯಿತ ಕುಶಲಕರ್ಮಿಗಳಿಗೆ ಕಚ್ಚಾವಸ್ತುಗಳಾದ ಶ್ರೀಗಂಧ, ಬೆಳ್ಳಿ, ಸತುವಿನಂತಹ ಲೋಹಗಳನ್ನು ಶೇ 50 ರಷ್ಟು ಕಡಿಮೆ ದರದಲ್ಲಿ ನೀಡಲಾಗುತ್ತಿದೆ' ಎಂದು ಹೇಳಿದರು. ನಿಗಮದ ನಿರ್ದೇಶಕ ಎಸ್.ಕೆ.ರವಿಕುಮಾರ್, ಶಾಸಕ ಬಿ.ಎನ್.ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.