ADVERTISEMENT

ಕಾವೇರಿ ಉಳಿಸಿ: ಕೆಆರ್‌ಎಸ್‌ಗೆ ಕಾರು ಜಾಥಾ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:20 IST
Last Updated 3 ಅಕ್ಟೋಬರ್ 2012, 19:20 IST

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ವಿಶ್ವ ಒಕ್ಕಲಿಗರ ಮಹಾವೇದಿಕೆಯ ನೇತೃತ್ವದಲ್ಲಿ ನಗರದ ಪುರಭವನದಿಂದ ಕನ್ನಂಬಾಡಿ ಕಟ್ಟೆವರೆಗೆ ಕಾವೇರಿ ಉಳಿಸಿ `ಕಾರು ಜಾಥಾ~ ಬುಧವಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ತಮಿಳುನಾಡಿಗೆ ನೀರು ಬಿಡುವುದನ್ನು ರಾಜ್ಯ ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು. ನೀರು ಬಿಡುವುದನ್ನು ಮುಂದುವರಿಸಿದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, `ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯ ಇದೆ. ಶಾಶ್ವತ ಪರಿಹಾರ ಹುಡುಕುವಾಗ ಯಾರಿಗೂ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ~ ಎಂದರು.

ಹಿರಿಯ ನಟ ಅಂಬರೀಷ್ ಮಾತನಾಡಿ, `ಕಾವೇರಿ ನದಿ ನೀರು ನಮ್ಮದು. ರಾಜ್ಯದ ಜನರು ಸಂಯಮ ಕಳೆದುಕೊಳ್ಳದೇ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು. ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ~ ಎಂದರು.

ಶ್ರೀಕ್ಷೇತ್ರ ಸ್ಪಟಿಕಪುರಿಯ ನಂಜಾವಧೂತ ಸ್ವಾಮೀಜಿ ಮಾತನಾಡಿ, `ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ತಮಿಳುನಾಡಿಗಿಂತ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಕೇಂದ್ರ ಸರ್ಕಾರ ಸಮಸ್ಯೆಯ ಗಂಭೀರತೆಯನ್ನು ಅರಿತು ಸೂಚನೆಯನ್ನು ವಾಪಸ್ ಪಡೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು. ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಮಲ್ಲೇಶ್ವರದ ಶಾಸಕ ಡಾ.ಅಶ್ವತ್ಥನಾರಾಯಣ, ಕನ್ನಡಪರ ಸಂಘಟನೆಗಳ ಪ್ರಭಾಕರ ರೆಡ್ಡಿ, ಎಂ.ಆರ್.ವೆಂಕಟೇಶ್, ನಟ ಶ್ರೀನಗರ ಕಿಟ್ಟಿ, ಬಿಬಿಎಂಪಿ ಸದಸ್ಯ ತಿಮ್ಮೇಗೌಡ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.