ADVERTISEMENT

ಕುಲಪತಿ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ನಾರಾಯಣಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಸಮತಾ ಸೈನಿಕ ದಳದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

`ನಾರಾಯಣಗೌಡ ಅವರು ಕುಲಪತಿಯಾದ ನಂತರ ವಿ.ವಿಯಲ್ಲಿರುವ ದಲಿತ ಸಿಬ್ಬಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಈ ಹಿಂದಿನ ಕುಲಪತಿಗಳು ಸಹಾಯಕ ಪ್ರಾಧ್ಯಾಪಕರಿಗೆ ಸೇವಾ ಉನ್ನತಿ ಯೋಜನೆಯಡಿ 60 ಮಂದಿಗೆ ಬಡ್ತಿ ನೀಡಿದ್ದರು. ಬಡ್ತಿ ಪಡೆದವರಲ್ಲಿ 42 ಮಂದಿ ದಲಿತರೆ ಇದ್ದರು. ಈ ಕಾರಣದಿಂದ ನಾರಾಯಣಗೌಡ ಅವರು ಎಲ್ಲರ ಬಡ್ತಿಗಳನ್ನು ಹಿಂಪಡೆದು ತಾನು ದಲಿತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ ಅವರು ಕಾನೂನು ನಿಯಮಗಳನ್ನು ಮೀರಿ ಸ್ವಜಾತಿಯ ಸಿಬ್ಬಂದಿಯನ್ನು ರಕ್ಷಿಸಿರುವ ನಿದರ್ಶನಗಳಿವೆ~ ಎಂದು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಆರೋಪಿಸಿದರು.

`ಡಿ.ರಾಜಣ್ಣ ಎಂಬ ದಲಿತ ವಿಜ್ಞಾನಿ ಮಂಡ್ಯದಲ್ಲಿ `ಬೆಲ್ಲದ ಪಾರ್ಕ್~ ಎಂಬ ಯೋಜನೆಯನ್ನು ಕೈಗೊಂಡಿದ್ದರು. ಆ ಯೋಜನೆಗೆ ರೈತರಿಂದ, ಸಂಘಸಂಸ್ಥೆಗಳಿಂದ, ಸರ್ಕಾರದಿಂದ ಪ್ರಶಂಸೆಗಳು ಹರಿದು ಬಂದವು. ಆದರೆ, ಅದರ ಯಶಸ್ಸು ಒಬ್ಬ ದಲಿತನಿಗೆ ಹೋಗುತ್ತಿದೆ ಎಂಬ ಕಾರಣಕ್ಕೆ ಕುಲಪತಿಯವರು ರಾಜಣ್ಣ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದರು. ಅಲ್ಲದೇ ಆ ಯೋಜನೆಯ ಜವಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿದ್ದಾರೆ. ಈ ರೀತಿ ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ನಾರಾಯಣಗೌಡ ಅವರನ್ನು ಕುಲಪತಿ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ದಲಿತ ವ್ಯಕ್ತಿಯನ್ನು ನೇಮಿಸಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ವಿ.ವಿಯ ಸಸ್ಯ ಉದ್ಯಾನವನದ ಅಭಿವೃದ್ಧಿ ಕಾರ್ಯದಲ್ಲಿ 1.80 ಕೋಟಿ ರೂಪಾಯಿಗಳ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ. ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿ ಸತ್ಯ ಬಯಲು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಗೆ ಖಂಡನೆ

`ಕುಲಪತಿ ಡಾ.ಕೆ.ನಾರಾಯಣಗೌಡ ಅವರು ಕುಲಪತಿಯಾಗಿ ಎಲ್ಲಾ ಜಾತಿ, ವರ್ಗದ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದಾರೆ. ಸಮತಾ ಸೈನಿಕ ದಳದ ಸದಸ್ಯರ ಆರೋಪಗಳಲ್ಲಿ ಹುರುಳಿಲ್ಲ~ ಎಂದು ಪ.ಜಾತಿ ಮತ್ತು ಪ.ಪಂಗಡ ಘಟಕದ ಕೆಲ ಭೋದಕ ಮತ್ತು ಭೋದಕೇತರ ನೌಕರರು ಸ್ಪಷ್ಟಪಡಿಸಿದ್ದಾರೆ.

`ನಾರಾಯಣಗೌಡ ಅವರು ತಮ್ಮ ಆಡಳಿತಾವಧಿಯಲ್ಲಿ ಭೋದಕ ಮತ್ತು ಭೋದಕೇತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ. ಉನ್ನತ ಹುದ್ದೆಗಳಿಗೆ ಹಿಂದುಳಿದ ವರ್ಗದವರನ್ನು ನೇಮಿಸಿದ್ದಾರೆ. ವಿ.ವಿಯ ಎಲ್ಲಾ ವಿಭಾಗಗಳಲ್ಲೂ ಶೇ 23ಕ್ಕೂ ಹೆಚ್ಚು ಮಂದಿ ಹಿಂದುಳಿದ ವರ್ಗದ ಸಿಬ್ಬಂದಿಯೇ ಇದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಾಧಿಕಾರಿಗಳ ಹುದ್ದೆಯನ್ನು ಕಾಯಂಗೊಳಿಸಿದ್ದಾರೆ. ಹಿಂದುಳಿದ ವಿದ್ಯಾರ್ಥಿಗಳ ವಸತಿ ಸೌಲಭ್ಯದ ಮೊತ್ತವನ್ನು 425 ರೂಪಾಯಿಯಿಂದ 740 ರೂಪಾಯಿಗೆ ಹೆಚ್ಚಿಸಿದ್ದಾರೆ. ಆದರೂ, ಕೆಲವು ನೌಕರರು ಅವರನ್ನು ದಲಿತ ವಿರೋಧಿ ಎಂದು ಬಿಂಬಿಸಿರುವುದು ಖಂಡನೀಯ~ ಎಂದು ನೌಕರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.