ADVERTISEMENT

ಕುಲಾಂತರಿ ತಂತ್ರಜ್ಞಾನದ ಕ್ಷೇತ್ರ ಕಾರ್ಯಕ್ಕೆ ಅನುವು: ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 20:32 IST
Last Updated 8 ಜನವರಿ 2014, 20:32 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ‘ಕುಲಾಂತರಿ ತಂತ್ರಜ್ಞಾನ’ ಕುರಿತ  ಮಾಧ್ಯಮ ಸಂವಾದದಲ್ಲಿ ಡಾ. ಎಂ.ಎ.ಶಂಕರ್‌ ಹಾಗೂ ಡಾ. ಬಿ. ಸೆಸಿಕೆರನ್‌ ಸಮಾಲೋಚನೆ ನಡೆಸಿದರು. ವಿಶ್ರಾಂತ ಕುಲಪತಿ ಡಾ.ಎಂ. ಮಹದೇವಪ್ಪ ಚಿತ್ರದಲ್ಲಿದ್ದಾರೆ 	–ಪ್ರಜಾವಾಣಿ ಚಿತ್ರ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ‘ಕುಲಾಂತರಿ ತಂತ್ರಜ್ಞಾನ’ ಕುರಿತ ಮಾಧ್ಯಮ ಸಂವಾದದಲ್ಲಿ ಡಾ. ಎಂ.ಎ.ಶಂಕರ್‌ ಹಾಗೂ ಡಾ. ಬಿ. ಸೆಸಿಕೆರನ್‌ ಸಮಾಲೋಚನೆ ನಡೆಸಿದರು. ವಿಶ್ರಾಂತ ಕುಲಪತಿ ಡಾ.ಎಂ. ಮಹದೇವಪ್ಪ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕುಲಾಂತರಿ ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿರುವ ಬಿ.ಟಿ. ಬದನೆ, ಬಿ.ಟಿ. ಅಕ್ಕಿ ಸೇರಿದಂತೆ ಅನೇಕ ತಳಿಗಳ ಕ್ಷೇತ್ರ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಒಂದು ಕಡೆ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುವ ಸರ್ಕಾರ ಸಂಶೋಧನಾ ಚಟುವಟಿಕೆಯ ಲಾಭ ಫಲಾನು ಭವಿಗಳಿಗೆ ದೊರಕಲು ಅವಕಾಶ ಕಲ್ಪಿಸುತ್ತಿಲ್ಲ’ ಎಂದು ಹೈದರಾಬಾದಿನ ಪೌಷ್ಟಿಕಾಂಶದ ರಾಷ್ಟ್ರೀಯ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಬಿ.ಸೆಸಿಕೆರನ್‌ ಕಿಡಿಕಾರಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ‘ಕುಲಾಂತರಿ ತಂತ್ರಜ್ಞಾನ’ ಕುರಿತ  ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಂ. ಉದಯ ಕುಮಾರ್‌, ‘ಈ  ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ 28 ತಳಿಗಳು ಕ್ಷೇತ್ರ ಕಾರ್ಯಕ್ಕೆ ಕಾಯುತ್ತಿವೆ. ಸರ್ಕಾರ ಇದಕ್ಕೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎ.ಮಂಜುನಾಥ್‌, ‘ಜಿ.ಎಂ. ಬೆಳೆಗಳನ್ನು 1996ರಿಂದಲೂ ಬೆಳೆಯಲಾಗುತ್ತಿದೆ. ಈಗ 28 ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲಿ 2002ರಿಂದ ಬಿ.ಟಿ. ಹತ್ತಿ ಬೆಳೆಯಲಾಗುತ್ತಿದೆ ಎಂದರು.

ಧಾರವಾಡ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ. ಮಹದೇವಪ್ಪ, ‘ಕುಲಾಂತರಿ ತಳಿಗಳು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತದಲ್ಲಿ ಇರಲಿದೆ ಎಂಬುದು ತಪ್ಪು ಕಲ್ಪನೆ. ರೈತರ ಹಿಡಿತದಲ್ಲೇ ತಳಿಗಳು ಇರಲಿವೆ. ನಮ್ಮ ಸರ್ಕಾರಿ ಸಂಸ್ಥೆಗಳಿಂದಲೇ ವಂಶಾಂತರಿ ತಳಿಗಳನ್ನು ಕಂಡು ಹಿಡಿಯಲು ಸಾಧ್ಯ ಇದೆ’ ಎಂದರು.

‘ಗಣೇಶ ಹುಟ್ಟಿದ್ದು ಕುಲಾಂತರಿ ತಂತ್ರಜ್ಞಾನದಿಂದ’

‘ಭಾರತಕ್ಕೆ ಕುಲಾಂತರಿ ತಂತ್ರಜ್ಞಾನ ಹೊಸದಲ್ಲ. 99 ಮಂದಿ ಕೌರವರು ಹುಟ್ಟಿದ್ದು ಕುಲಾಂತರಿ ತಂತ್ರಜ್ಞಾನದಿಂದ. ಗಣೇಶನೂ ಹುಟ್ಟಿದ್ದು ವಂಶಾಂತರಿ ತಂತ್ರಜ್ಞಾನ ದಿಂದಲೇ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್‌ ವ್ಯಾಖ್ಯಾನಿಸಿದರು. ಸಂವಾದದ ನೇತೃತ್ವ ವಹಿಸಿದ್ದ  ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT