ADVERTISEMENT

ಕುಸಿಯುತ್ತಿರುವ ಸಾಮಾಜಿಕ ಮೌಲ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:35 IST
Last Updated 12 ಫೆಬ್ರುವರಿ 2012, 19:35 IST
ಕುಸಿಯುತ್ತಿರುವ ಸಾಮಾಜಿಕ ಮೌಲ್ಯ
ಕುಸಿಯುತ್ತಿರುವ ಸಾಮಾಜಿಕ ಮೌಲ್ಯ   

ಬೆಂಗಳೂರು: `ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜನತೆಗೆ ವೈಚಾರಿಕ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆಂದೋಲನ ನಡೆಸಲಾಗುವುದು~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ `ವೈಚಾರಿಕ ಜಾಗೃತಿಗಾಗಿ ರಾಜ್ಯ ಮಟ್ಟದ ಸಮಾಲೋಚನಾ ಸಭೆ~ ಯಲ್ಲಿ ಮಾತನಾಡಿದ ಅವರು, `ವಿದ್ಯಾವಂತ ಜನರೇ ಹೆಚ್ಚು ಮೌಢ್ಯಗಳ ಅನುಕರಣೆಯಲ್ಲಿ ತೊಡಗಿದ್ದಾರೆ. ಇದನ್ನು ನೀಗಿಸಲು ಜನರಲ್ಲಿನ ಮೌಢ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಜಿಲ್ಲೆಗಳ ಜಾಗೃತಿ ಚಳವಳಿಯ ನಂತರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ~ ಎಂದು ಅವರು ತಿಳಿಸಿದರು.

`ಮಡೆಸ್ನಾನ ಹಾಗೂ ಪಂಕ್ತಿಭೇದದ ವಿಚಾರಗಳು ನಮ್ಮ ಹೋರಾಟದ ಸಂಕೇತಗಳಷ್ಟೇ. ಅವುಗಳ ಮೂಲಕ ಎಲ್ಲ ಮೌಢ್ಯಗಳನ್ನು ತೊಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಬೃಹತ್ ಸಮಾವೇಶದಲ್ಲಿ ನಮ್ಮಲ್ಲಿನ ಮೌಢ್ಯಗಳ ನಿವಾರಣೆಯ ಬಗ್ಗೆ ಚರ್ಚೆ ನಡೆಸಿ, ನಂತರ ರಾಜ್ಯದ ಎಲ್ಲ ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನಿಷೇಧಿಸುವಂತೆ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹಿರಿಯ ಸಾಹಿತಿ ಡಾ.ಮರುಳಸಿದ್ದಪ್ಪ ಮಾತನಾಡಿ, `ನಂಬಿಕೆ ಹಾಗೂ ಮೂಢ ನಂಬಿಕೆಗಳ ನಡುವಿನ ಅಂತರ ತುಂಬಾ ಸೂಕ್ಷ್ಮವಾದುದು. ನಮ್ಮ ದೇಶದಲ್ಲಿ ಬಹುಪಾಲು ಜನರು ನಂಬಿಕೆಯ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ನಂಬಿಕೆ ಹಾಗೂ ಮೂಢ ನಂಬಿಕೆಗಳ ಬಗ್ಗೆ ಜನರಿಗೆ ಜಾಗೃತಿಯ ಅಗತ್ಯವಿದೆ. ಮೌಢ್ಯದ ವಿರುದ್ಧ ರಾಷ್ಟ್ರಕ್ಕೇ ಮಾದರಿಯಾಗುವಂಥ ಹೊಸ ಚಳವಳಿಯನ್ನು ಆರಂಭಿಸಬೇಕಿದೆ. ಮೂಢನಂಬಿಕೆಗಳನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡತರುವ ಕೆಲಸ ಆಗಬೇಕು. ಆದರೆ ಈ ಹೋರಾಟ ಕೇವಲ ಆರಂಭ ಶೂರತ್ವವಾಗಬಾರದು~ ಎಂದು ಅವರು ನುಡಿದರು.

ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, `ಬಿಜೆಪಿ ಸರ್ಕಾರ ಹಾಗೂ ಸಂಘಪರಿವಾರಗಳು ರಾಜ್ಯದಲ್ಲಿ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿವೆ. ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಿ ಕೇಸರೀಕರಣ ನಡೆಯುತ್ತಿದೆ. ಇದೊಂದು ಗಂಭೀರ ವಿಷಯ. ಇದು ಸರ್ಕಾರದ ಜನ ವಿರೋಧಿ ನೀತಿ~ ಎಂದು ಅವರು ಕಿಡಿ ಕಾರಿದರು.

ಗುಳೇದಗುಡ್ಡದ ಗುರುಸಿದ್ಧೇಶ್ವರ ಬೃಹನ್ಮಠದ ಬಸವರಾಜ ಸ್ವಾಮೀಜಿ, `ಸಮಾಜದಲ್ಲಿ ಮೌಢ್ಯಗಳು ಹೆಚ್ಚಾಗಲು ಮುಖ್ಯವಾಗಿ ಮಠಾಧೀಶರು ಹಾಗೂ ದೃಶ್ಯ ಮಾಧ್ಯಮಗಳು ಕಾರಣ. ಮೌಲ್ಯಗಳ ಅರಿವು ಮೂಡಿಸಲು ಮಠಾಧೀಶರಿಗಾಗಿಯೇ ಒಂದು ಕಾರ್ಯಾಗಾರ ಆಯೋಜಿಸಬೇಕು ಎಂದರು.

ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, `ಜನರು ಮೌಢ್ಯವನ್ನು ಮೀರುವ ಪ್ರಯತ್ನವಾಗಬೇಕು. ಇದಕ್ಕಾಗಿ ಸರಿಯಾದ ಹೋರಾಟದ ಅಗತ್ಯವಿದೆ ~ ಎಂದರು. ಸಭೆಯಲ್ಲಿ ಹರಿಹರದ ಪದ್ಮಶಾಲಿ ಪೀಠದ ಪ್ರಭುಲಿಂಗ ಸ್ವಾಮೀಜಿ, ತಿ.ನರಸೀಪುರದ ನಳಂದ ಬುದ್ಧ ವಿಹಾರದ ಬಂತೆ ಭೋಧಿರತ್ನ, ಕೆಂಗೇರಿ ಒಕ್ಕಲಿಗ ಸಂಸ್ಥಾನ ಮಠದ ಶ್ರೀಗಳು, ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.