ADVERTISEMENT

ಕೃಷಿ ಸಮಸ್ಯೆ ಚಿಂತನೆಗೆ ರೈತ ದಿನಾಚರಣೆ ಬೇಕು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:10 IST
Last Updated 12 ಸೆಪ್ಟೆಂಬರ್ 2011, 19:10 IST

ನೆಲಮಂಗಲ:  ದೇಶಕ್ಕೆ ಅನ್ನ ನೀಡುವ ರೈತ, ಅಕ್ಷರ ಕಲಿಸುವ ಶಿಕ್ಷಕ ರಾಷ್ಟ್ರದ ಕಡೆಗಣನೆಗೆ ಗುರಿಯಾಗಿದ್ದಾರೆ. ಶಿಕ್ಷಕರ ದಿನಾಚರಣೆ ಮಾದರಿಯಲ್ಲಿ ರೈತ ದಿನಾಚರಣೆಯನ್ನು ಆಚರಿಸುವ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚಿಂತನ ಮಂಥನ ನಡೆಯುವಂತಾಗಬೇಕು ಎಂದು ಡಿಡಿಪಿಐ ಎಚ್.ವಿ. ವೆಂಕಟೇಶಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಶಿಕ್ಷಕರು ತಮ್ಮ ವೃತ್ತಿಯನ್ನು ಸೇವೆಯಾಗಿ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಮಾದರಿ ವ್ಯಕ್ತಿಗಳನ್ನಾಗಿ ರೂಪಿಸಬೇಕು~ ಎಂದು ಸಲಹೆ ಮಾಡಿದರು.

ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆಯಲ್ಲಿ ಶಿಕ್ಷಕರ ಗೃಹ ನಿರ್ಮಾಣ ಸಂಘವನ್ನು ಪ್ರಾರಂಭಿಸಲಾಗಿದ್ದು, ಶಿಕ್ಷಕರು ಸದಸ್ಯತ್ವ ಪಡೆದುಕೊಳ್ಳಲು ಮುಂದಾಗಬೇಕು ಎಂದು ಪ್ರಾಂಶುಪಾಲರ ಸಂಘದ ಸಂಚಾಲಕ ಎಚ್.ಬಿ.ಪ್ರಕಾಶ್ ಕೋರಿದರು.

ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಎಂ.    ಎನ್.ರಾಮ್, ತಾ.ಪಂ. ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿದರು. ಲಯನ್ಸ್ ಸಂಸ್ಥೆಯ ವತಿಯಿಂದ ಡಾ.ಎಂ.ಜಯಪ್ರಸಾದ್ ಪ್ರಾಯೋಜಕತ್ವದಲ್ಲಿ ನಿವೃತ್ತ ಶಿಕ್ಷಕ ಮಲ್ಲಪ್ಪ ಸ್ಮರಣಾರ್ಥ ಪ್ರಶಸ್ತಿಯನ್ನು ಶಿಕ್ಷಕರಿಗೆ ನೀಡಿ ಗೌರವಿಸಲಾಯಿತು. 

ರಾಜ್ಯ ಪ್ರಶಸ್ತಿ ಪುರಸ್ಕೃತ ಪುಟ್ಟರುದ್ರಾರಾಧ್ಯ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸದಾನಂದಾರಾಧ್ಯ ಮತ್ತಿತರರನ್ನು ಸನ್ಮಾನಿಸಲಾಯಿತು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಟಿ.ಕೆ.ನರಸೇಗೌಡ, ಪುರಸಭೆ ಅಧ್ಯಕ್ಷ ಪಿಳ್ಳಪ್ಪ, ಜಿ.ಪಂ. ಸದಸ್ಯೆ ಸುನಂದ ಶಿವಕುಮಾರ್, ವಿವಿಧ ಸಂಘ-ಸಂಸ್ಥೆಗ ಅಧ್ಯಕ್ಷರು ವೇದಿಕೆ ಯಲ್ಲಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಮಂಜುನಾಥ್ ಸ್ವಾಗತಿಸಿ, ಕ್ಷೇತ್ರ ಸಮನ್ವಯಾಧಿಕಾರಿ ಹನುಮಾನಾಯಕ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.