ADVERTISEMENT

ಕೆಂಪಾಂಬುದಿ ಕೆರೆಗೆ ಕಾಯಕಲ್ಪ

ಅಧಿಕಾರಿಗಳಿಗೆ ಮೇಯರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ನಗರದ ಕೆಂಬಾಂಬುದಿ ಕೆರೆಗೆ ಮಂಗಳವಾರ ಮೇಯರ್‌ ಭೇಟಿ ನೀಡಿ, ಕೆರೆಗೆ ಕೊಳಚೆ ನೀರು ಸೇರುತ್ತಿರುವುದನ್ನು ಗಮನಿಸಿದರು. ಉಪಮೇಯರ್‌ ಇಂದಿರಾ, ಶಾಸಕ ಆರ್.ವಿ. ದೇವರಾಜ್, ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು
ನಗರದ ಕೆಂಬಾಂಬುದಿ ಕೆರೆಗೆ ಮಂಗಳವಾರ ಮೇಯರ್‌ ಭೇಟಿ ನೀಡಿ, ಕೆರೆಗೆ ಕೊಳಚೆ ನೀರು ಸೇರುತ್ತಿರುವುದನ್ನು ಗಮನಿಸಿದರು. ಉಪಮೇಯರ್‌ ಇಂದಿರಾ, ಶಾಸಕ ಆರ್.ವಿ. ದೇವರಾಜ್, ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು   

ಬೆಂಗಳೂರು: ಕೆಂಪಾಂಬುದಿ ಕೆರೆಗೆ ಹರಿಯುತ್ತಿರುವ ಕೊಳಚೆ ನೀರನ್ನು ತಡೆದು, ಬೇರೆ ಮಾರ್ಗದ ಮೂಲಕ ಚರಂಡಿಗೆ ಸಂಪರ್ಕ ಕಲ್ಪಿಸಬೇಕು ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಪೇಟೆ ಕ್ಷೇತ್ರದ ಶಾಸಕ ಆರ್.ವಿ. ದೇವರಾಜ್ ಮತ್ತು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರೊಂದಿಗೆ ಮಂಗಳವಾರ ಕೆರೆ ಪರಿಶೀಲಿಸಿದ ಅವರು, ಈ ಸೂಚನೆ ನೀಡಿದರು.

ಕೆರೆಯ ಅಭಿವೃದ್ಧಿಗೆ ಒಂದು ತಿಂಗಳ ಒಳಗಾಗಿ ಯೋಜನೆಯನ್ನು ಸಿದ್ಧಪಡಿಸಿ, ಅಭಿವೃದ್ಧಿಗೆ ಚಾಲನೆ ನೀಡಬೇಕು. ಅಗತ್ಯವಾದ ಹಣಕಾಸಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು. 

ಕೆರೆಯಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆಗೆದು, ಸ್ವಚ್ಛಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. 
ಕೆರೆಯ ಆವರಣದಲ್ಲಿರುವ ಬಂಡಿಕಾಳಮ್ಮ ದೇವಸ್ಥಾನದ ಸುತ್ತಮುತ್ತ ಸುಮಾರು ೫ರಿಂದ ೬ ಎಕರೆ ಪ್ರದೇಶ ಅತಿಕ್ರಮಣಗೊಂಡಿದ್ದು, ಅದನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದಿನ ಭಾನುವಾರ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ದೇವರಾಜ್‌ ತಿಳಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸುವುದಾಗಿ ಮೇಯರ್‌ ಭರವಸೆ ನೀಡಿದರು.

ಕೆಂಪಾಂಬುದಿ ಕೆರೆ ಪ್ರದೇಶದ ರಸ್ತೆಗಳಲ್ಲಿ ಕಟ್ಟಡದ ಭಗ್ನಾವಶೇಷಗಳನ್ನು ಸುರಿಯಲಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಆಯುಕ್ತರು ತಕ್ಷಣ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಬೇಕು ಮತ್ತು ಅದನ್ನು ಸುರಿದವರಿಗೆ ದಂಡ ವಿಧಿಸಬೇಕು ಎಂದು ತಿಳಿಸಿದರು.

ಬಸವನಗುಡಿಯಲ್ಲಿ ಇರುವ ಪಾಲಿಕೆಯ ಮಾರುಕಟ್ಟೆಗೆ ತಂಡ ಭೇಟಿ ನೀಡಿತು. ಪಾರ್ಕಿಂಗ್‌ ಸೌಲಭ್ಯವೂ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಮೇಯರ್‌ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.