ADVERTISEMENT

ಕೆಂಪು ತೋಟದಲ್ಲಿ ಎಷ್ಟೊಂದು ಕಚೇರಿಗಳು!

ಲಾಲ್ ಬಾಗ್ ಪಾರ್ಕಿಂಗ್ ಸುತ್ತ 3

​ಪ್ರಜಾವಾಣಿ ವಾರ್ತೆ
Published 15 ಜನವರಿ 2013, 19:59 IST
Last Updated 15 ಜನವರಿ 2013, 19:59 IST
ಒಂದು ಅಪರೂಪದ ಕಲಾಕೃತಿ: ಜಿ.ಎಚ್. ಕ್ರುಂಬಿಗಲ್ ಪೆನ್ಸಿಲ್‌ನಲ್ಲಿ ಬಿಡಿಸಿದ ತೋಟಗಾರಿಕಾ ಇಲಾಖೆಯ ನಿರ್ದೇಶಕರ ಕಚೇರಿ ಕಟ್ಟಡ
ಒಂದು ಅಪರೂಪದ ಕಲಾಕೃತಿ: ಜಿ.ಎಚ್. ಕ್ರುಂಬಿಗಲ್ ಪೆನ್ಸಿಲ್‌ನಲ್ಲಿ ಬಿಡಿಸಿದ ತೋಟಗಾರಿಕಾ ಇಲಾಖೆಯ ನಿರ್ದೇಶಕರ ಕಚೇರಿ ಕಟ್ಟಡ   

ಬೆಂಗಳೂರು: ಅಸಾಧಾರಣ ಚಿತ್ರ ಕಲಾವಿದರೂ ಆಗಿದ್ದ ಜಿ.ಎಚ್. ಕ್ರುಂಬಿಗಲ್, ಲಾಲ್‌ಬಾಗ್ ಉಸ್ತುವಾರಿ ಅಧಿಕಾರಿಯಾಗಿ ಉದ್ಯಾನವನ್ನು ಬಲು ಜತನದಿಂದ ಬೆಳೆಸಿದವರು. ಉದ್ಯಾನದಲ್ಲೇ ಕೆಲಸ ಮಾಡಲು ಸೂರು ಒದಗಿಸಿದ ಆ ಮೊಗಲ್ ಶೈಲಿಯ ಕೆಂಪು ಕಟ್ಟಡ ಅವರ ಮನಸ್ಸನ್ನು ಎಷ್ಟೊಂದು ಸೆರೆ ಹಿಡಿದಿತ್ತೆಂದರೆ ಒಮ್ಮೆ ಆ ಕಟ್ಟಡದ ಮುಂದೆ ಕುರ್ಚಿ ಹಾಕಿ ಕುಳಿತುಕೊಂಡು ಅದರ ಚಿತ್ರವನ್ನು ಪೆನ್ಸಿಲ್‌ನಿಂದ ಬಿಡಿಸಿದ್ದರು.

ಕ್ರುಂಬಿಗಲ್ ಮಾತ್ರವಲ್ಲದೆ ಜಾನ್ ಕ್ಯಾಮರನ್, ನಮ್ಮವರೇ ಆದ ರಾವ್ ಬಹದ್ದೂರ್ ಎಚ್.ಸಿ. ಜವರಾಯ, ಕೆ.ನಂಜಪ್ಪ ಮತ್ತು ಡಾ.ಎಂ.ಎಚ್. ಮರಿಗೌಡ ಅವರಂತಹ ಘಟಾನುಘಟಿಗಳು ಕುಳಿತು ಕೆಲಸ ಮಾಡಿದ ಐತಿಹಾಸಿಕ ಕಚೇರಿ ಕಟ್ಟಡ ಅದಾಗಿದೆ. ತೋಟಗಾರಿಕೆ ನಿರ್ದೇಶಕರು ಮತ್ತು ಅಧೀಕ್ಷಕರು ಆಗ ಉದ್ಯಾನದಲ್ಲೇ ಕಡ್ಡಾಯವಾಗಿ ವಾಸ ಮಾಡಬೇಕಿತ್ತು. ಅವರ ನಿವಾಸಕ್ಕಾಗಿ `ಲಾಲ್‌ಬಾಗ್ ಹೌಸ್' ಮತ್ತು `ಲಾಲ್‌ಬಾಗ್ ಕಾಟೇಜ್' ಎಂಬ ಸರ್ಕಾರಿ ಮನೆಗಳಿದ್ದವು.

ತೋಟಗಾರಿಕೆ ಇಲಾಖೆಯ ಇತರ ಹಿರಿಯ ಅಧಿಕಾರಿಗಳಂತೆ ದಶಕಗಳ ಕಾಲ ಜವರಾಯ ಸಹ `ಲಾಲ್‌ಬಾಗ್ ಹೌಸ್'ನಲ್ಲೇ ವಾಸವಾಗಿದ್ದರು. ಹೀಗಾಗಿ ಅವರ ಮಕ್ಕಳು ಈ ಐತಿಹಾಸಿಕ ಉದ್ಯಾನದಲ್ಲಿ ಆಡಿ, ಬೆಳೆಯುವ ಅವಕಾಶ ಪಡೆದಿದ್ದರು.

`ಗುಮಾಸ್ತರಗಿಂತಲೂ ಮಾಲಿಗಳೇ ಹೆಚ್ಚಾಗಿದ್ದ ಕಾಲ ಅದು. ಕಚೇರಿಯಲ್ಲಿ ಹುಡುಕಿದರೂ ಜನ ಸಿಗುತ್ತಿರಲಿಲ್ಲ. ಎಲ್ಲರೂ ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದರು. ನೀರು ಹಾಕುವುದು, ಹೊಸ, ಹೊಸ ಸಸಿ ಬೆಳೆಸುವುದು, ಕಸ ತೆಗೆಯುವುದು, ಹಣ್ಣು ಆಯುವುದು... ಎಲ್ಲರಿಗೂ ಕೈತುಂಬಾ ಕೆಲಸ. ಓಡಾಡಲು ಕುದುರೆ ಗಾಡಿಗಳಿದ್ದವು' ಎಂದು ಜವರಾಯ ಅವರ ಪುತ್ರ ಸಿ.ಜೆ. ದೇವನಾಥ್ ಒಮ್ಮೆ ಮೆಲುಕು ಹಾಕಿದ್ದರು.

ಇತಿಹಾಸದ ಈ ಪುಟವನ್ನು ಮತ್ತೆ ತಿರುವಿ ಹಾಕಲು ಕಾರಣವಿದೆ. ತನ್ನ ಅಭಿವೃದ್ಧಿಗಾಗಿ ಶ್ರಮಿಸುವ ಸಿಬ್ಬಂದಿಗೆ ತನ್ನಲ್ಲೇ ಸೂರು ಒದಗಿಸಿ ಕೃತಾರ್ಥ ಭಾವ ಅನುಭವಿಸಿದ್ದ ಉದ್ಯಾನ, ಈಗ ಹೆಚ್ಚಾಗಿರುವ ತೋಟಗಾರಿಕಾ ಇಲಾಖೆ ಕಚೇರಿಗಳು, ತುಂಬಿಕೊಂಡಿರುವ ಸಿಬ್ಬಂದಿ, ಅವರನ್ನು ಹೊತ್ತು ತರುವ ವಾಹನಗಳ ಭಾರದಿಂದ ಕಿರಿಕಿರಿ ಅನುಭವಿಸುತ್ತಿದೆ.

ಲಾಲ್‌ಬಾಗ್ ಉದ್ಯಾನದ ಸರ್ಕಾರಿ ಕಚೇರಿಗಳ ವಿಷಯವಾಗಿ ಪರಿಸರ ಪ್ರೇಮಿ ಗೌತಮ್ ಆದಿತ್ಯ ಮತ್ತಿತರರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆದಿದ್ದಾರೆ. 20 ಸರ್ಕಾರಿ ಕಚೇರಿಗಳು, ಮೂರು ಅಂಗಸಂಸ್ಥೆಗಳು, 479 ಸಿಬ್ಬಂದಿ ಹಾಗೂ 70 ವಾಹನಗಳಿಗೆ ಉದ್ಯಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ವಿವರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ.

ನಿರ್ದೇಶಕರ ಕಚೇರಿ, ಮುಖ್ಯದ್ವಾರದ ಹತ್ತಿರವೇ ಇದ್ದರೆ, ಉಪ ನಿರ್ದೇಶಕರು ಸೇರಿದಂತೆ ಉಳಿದ ಕಚೇರಿಗಳು ಉದ್ಯಾನದ ತುಂಬಾ ಹರಿದು ಹಂಚಿಹೋಗಿವೆ. ಎಲ್ಲ ಕಡೆಗೂ ವಾಹನಗಳು ಓಡಾಡುತ್ತವೆ. ಉದ್ಯಾನದಲ್ಲೇ ಸರ್ಕಾರಿ ವಾಹನಗಳಿಗಾಗಿ 12 ಶೆಡ್‌ಗಳನ್ನು ನಿರ್ಮಿಸಲಾಗಿದೆ.
ಲಾಲ್‌ಬಾಗ್ ಆವರಣದಲ್ಲಿ ಹಾಪ್‌ಕಾಮ್ಸ ಶೈತ್ಯಾಗಾರವೂ ಇರುವುದರಿಂದ ನಿತ್ಯ ಐದು ಲಾರಿಗಳು ಸೇರಿದಂತೆ 25 ಸರಕು ಸಾಗಾಟದ ವಾಹನಗಳು ಶೈತ್ಯಾಗಾರಕ್ಕೆ ಹಣ್ಣು-ಹಂಪಲು ಮತ್ತು ತರಕಾರಿ ಶೇಖರಣೆ ಮಾಡಲು ಹಾಗೂ ಶೇಖರಣೆ ಮಾಡಿದ ಸರಕುಗಳನ್ನು ಮಳಿಗೆಗಳಿಗೆ ಒಯ್ಯಲು ಬರುತ್ತವೆ. ಕೆ.ಎಚ್. ರಸ್ತೆಗೆ ಹೊಂದಿಕೊಂಡ ದ್ವಾರದ ಮೂಲಕ ಅವುಗಳು ಓಡಾಡುತ್ತವೆ.

ಅಂದಹಾಗೆ, ಮುಂಚೆ ಮೃಗಾಲಯ ಇದ್ದದ್ದು ಲಾಲ್‌ಬಾಗ್‌ನಲ್ಲೇ. ಹುಲಿ, ಸಿಂಹ, ಕರಡಿ, ಕೃಷ್ಣಮೃಗ ಮೊದಲಾದ ಪ್ರಾಣಿಗಳು ಇಲ್ಲಿದ್ದವು. ಆದರೆ, 1920ರಲ್ಲಿ ಮೃಗಾಲಯವನ್ನು ಮೈಸೂರಿಗೆ ಸ್ಥಳಾಂತರಿಸಿ, ಲಾಲ್‌ಬಾಗ್ ಅನ್ನು ಸಸ್ಯೋದ್ಯಾನವನ್ನಾಗಿ ಮಾತ್ರ ಉಳಿಸಿಕೊಳ್ಳಲಾಯಿತು.
`ಉದ್ಯಾನದಲ್ಲಿ ಕಳ್ಳೆಕಾಯಿ, ಮೆಕ್ಕೆಜೋಳ, ಕುರುಕಲು ತಿಂಡಿ, ಚಹಾ, ಕಾಫಿ, ಹಣ್ಣಿನ ರಸ ಮಾರಾಟ ಮಾಡಲಾಗುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡಲಾಗುತ್ತದೆ' ಎಂಬ ದೂರು ಪರಿಸರ ಪ್ರಿಯರಿಂದ ಕೇಳಿಬಂದಿದೆ. `ಲಾಲ್‌ಬಾಗ್ ಒಳಗೆ ಹಾಪ್‌ಕಾಮ್ಸ ಹೊರತುಪಡಿಸಿ ಯಾರಿಗೂ ಆಹಾರ ಪದಾರ್ಥ ಮಾರಾಟ ಮಾಡಲು ಅವಕಾಶ ಕಲ್ಪಿಸಿಲ್ಲ' ಎಂಬ ಸ್ಪಷ್ಟನೆಯನ್ನು ತೋಟಗಾರಿಕಾ ಇಲಾಖೆ ನಿರ್ದೇಶಕರು ನೀಡುತ್ತಾರೆ.

`ತೋಟಗಾರಿಕೆ ಇಲಾಖೆ ಎಂದಮಾತ್ರಕ್ಕೆ ಎಲ್ಲ ಕಚೇರಿಗಳೂ ಉದ್ಯಾನದಲ್ಲಿ ಇರಬೇಕೆ' ಎನ್ನುವ ಪ್ರಶ್ನೆಯನ್ನು ಗೌತಮ್ ಆದಿತ್ಯ ಅವರಂತಹ ಹಲವು ಜನ ಪರಿಸರ ಪ್ರೇಮಿಗಳು ಎತ್ತಿದ್ದಾರೆ. `ಉದ್ಯಾನದ ಉಸ್ತುವಾರಿ ನೋಡಿಕೊಳ್ಳುವ ವಿಭಾಗವೊಂದನ್ನು ಹೊರತುಪಡಿಸಿ ಮಿಕ್ಕ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸಲು ಏನು ತೊಂದರೆ' ಎಂಬ ವಾದವನ್ನು ಅವರು ಮಂಡಿಸುತ್ತಾರೆ.

`ನಿಷೇಧ ವಿಧಿಸಲಾಗಿದ್ದರೂ ಜನ ಫುಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ ಆಡುತ್ತಾರೆ. ಪ್ರವಾಸಿಗರು ಆಹಾರ ಸಾಮಗ್ರಿ ತಿಂದು ಪ್ಲಾಸ್ಟಿಕ್ ಪೊಟ್ಟಣ ಎಲ್ಲೆಂದರಲ್ಲಿ ಬೀಸಾಡುತ್ತಾರೆ. ಮೆಟ್ರೊ ಮಾರ್ಗ ನಿರ್ಮಾಣಕ್ಕೂ ಉದ್ಯಾನದ ಭೂಮಿಯೇ ಬೇಕೆನಿಸುತ್ತದೆ. ಸರ್ಕಾರಿ ಕಚೇರಿಗಳು ಇಲ್ಲಿಯೇ ಕಿಕ್ಕಿರಿದಿವೆ. ಈ ಅವಾಂತರಗಳಿಗೆ ಕೊನೆ ಎಂಬುದಿಲ್ಲವೆ' ಎಂದು ನಿತ್ಯ ಈ ಉದ್ಯಾನದಲ್ಲಿ ಓಡಾಡುವ ಪರಿಸರವಾದಿಗಳು ಒಕ್ಕೊರಲಿನಿಂದ ಪ್ರಶ್ನಿಸುತ್ತಾರೆ. 

ಕಟ್ಟಡಗಳ ಸಮುಚ್ಚಯವಲ್ಲ...
ಜಗತ್ತಿನ ಎಲ್ಲ ಭಾಗದ ವಿರಳ ಸಸ್ಯ ಪ್ರಭೇದಗಳು ಲಾಲ್‌ಬಾಗ್‌ನಲ್ಲಿವೆ. ಸಸ್ಯಶಾಸ್ತ್ರಜ್ಞರ ಪಾಲಿಗೆ ನೈಜ ಅರ್ಥದಲ್ಲಿ ಇದೊಂದು ಸಸ್ಯಕಾಶಿ. ಒಂದೊಂದು ಪ್ರಭೇದದ ಅಧ್ಯಯನಕ್ಕೂ ಇಲ್ಲಿ ವಿಪುಲವಾದ ಅವಕಾಶ ಇದೆ. ಇಂತಹ ಉದ್ಯಾನವನ್ನು ನಾವು ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕಿದೆ. ಆದರೆ, ಪ್ರಧಾನ ದ್ವಾರದಿಂದ ಒಳಹೊಕ್ಕರೆ ಮರಗಳಿಗಿಂತ ಹೆಚ್ಚಾಗಿ ಕಟ್ಟಡಗಳೇ ಗೋಚರಿಸುತ್ತವೆ. ಉದ್ಯಾನದಲ್ಲಿ ಇಷ್ಟೊಂದು ಕಟ್ಟಡ ಬೇಡವಾಗಿತ್ತು. 20ಕ್ಕೂ ಅಧಿಕ ಕಚೇರಿಗಳು ಉದ್ಯಾನದಲ್ಲೇ ಇರುವುದು ದುರ್ದೈವದ ಸಂಗತಿ. ಲಾಲ್‌ಬಾಗ್ ಉಸ್ತುವಾರಿ ನೋಡಿಕೊಳ್ಳುವ ವಿಭಾಗವೊಂದನ್ನು ಹೊರತುಪಡಿಸಿ ಮಿಕ್ಕ ಕಚೇರಿಗಳಿಗೆ ಎಲ್ಲಿಯಾದರೂ ಸ್ಥಳಾವಕಾಶ ಮಾಡಿಕೊಳ್ಳಬೇಕಿತ್ತು. ಲಾಲ್‌ಬಾಗ್ ಒಂದು ಉದ್ಯಾನವೇ ಹೊರತು ಕಟ್ಟಡಗಳ ಸಮುಚ್ಚಯ ಅಲ್ಲ.

ಕಬ್ಬನ್ ಪಾರ್ಕ್‌ನಲ್ಲಿ ಶೇ 35ರಷ್ಟು ಭಾಗ ಕಟ್ಟಡ ಮತ್ತು ರಸ್ತೆಗಳೇ ಆಕ್ರಮಿಸಿಬಿಟ್ಟಿವೆ. ಅಂತಹ ಸ್ಥಿತಿ ಲಾಲ್‌ಬಾಗ್‌ಗೆ ಬರಬಾರದು. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವತ್ತ ಅಧಿಕಾರಿಗಳು ಚಿಂತನೆ ನಡೆಸಬೇಕೇ ವಿನಃ ಕಟ್ಟಡ ನಿರ್ಮಾಣ ಅಥವಾ ಕಚೇರಿ ಸ್ಥಾಪನೆ ಕಡೆಗಲ್ಲ.
-ಸುರೇಶ್ ಹೆಬ್ಳೀಕರ್, ಪರಿಸರವಾದಿ

ಉದ್ಯಾನವನ್ನು ಬ್ರಿಗೇಡ್ ರಸ್ತೆ ಮಾಡುವಿರಾ?

ದೊಡ್ಡ, ದೊಡ್ಡ ಕಟ್ಟಡಗಳು, ಪಾರ್ಕಿಂಗ್ ಸೌಲಭ್ಯ ಎಲ್ಲವನ್ನೂ ನಿರ್ಮಿಸುತ್ತಾ ಹೋಗಿ, ಉದ್ಯಾನವನ್ನು ಅವರೇನು ಬ್ರಿಗೇಡ್ ರಸ್ತೆ ಮಾಡಲು ಹೊರಟಿದ್ದಾರೋ ಹೇಗೋ? ಲಾಲ್‌ಬಾಗ್ ಕೇವಲ ಸಸ್ಯಕಾಶಿಯಾಗಿ ಉಳಿಯಬೇಕು. ಕವಿವಾಣಿಯಂತೆ ಅದು ಸಸ್ಯದೇಗುಲ. ಈ ಮಾತು ನಿತ್ಯ ಸತ್ಯವಾಗುವಂತೆ ತೋಟಗಾರಿಕಾ ಇಲಾಖೆ ಕಾರ್ಯ ನಿರ್ವಹಿಸಬೇಕು. ಉದ್ಯಾನದಲ್ಲೇ ಅಷ್ಟೊಂದು ಕಚೇರಿ ಇಟ್ಟುಕೊಂಡು ಇಲಾಖೆ ಏನು ಮಾಡುತ್ತದೆ? ಕಚೇರಿಗಳು ಹೆಚ್ಚಿದಷ್ಟೂ ಅಲ್ಲಿಯ ಪರಿಸರಕ್ಕೆ ಮಾರಕ ಎನ್ನುವುದು ಗೊತ್ತಿಲ್ಲವೆ? ಸಂಪೂರ್ಣ ಪ್ರಶಾಂತವಾದ ವಾತಾವರಣವನ್ನು ಅಲ್ಲಿ ಕಾಯ್ದುಕೊಳ್ಳಬೇಕು.
ಅ.ನ. ಯಲ್ಲಪ್ಪ ರೆಡ್ಡಿ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT