ADVERTISEMENT

ಕೆ.ಆರ್‌.ಮಾರ್ಕೆಟ್‌, ಶಿವಾಜಿನಗರ ಬಸ್‌ ನಿಲ್ದಾಣಗಳಿಗೆ ಹೊಸ ರೂಪ

₹180 ಕೋಟಿ ವಿನಿಯೋಗಕ್ಕೆ ಡಿಪಿಆರ್‌ ಸಿದ್ಧ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:38 IST
Last Updated 13 ಜುಲೈ 2017, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಶಿವಾಜಿನಗರದ ಬಸ್‌ ನಿಲ್ದಾಣ, ರಸೆಲ್‌ ಮಾರುಕಟ್ಟೆ ಹಾಗೂ ಕೆ.ಆರ್‌.ಮಾರುಕಟ್ಟೆಗೆ ₹180 ಕೋಟಿ ವೆಚ್ಚದಲ್ಲಿ ಹೊಸ ರೂಪ ನೀಡಲು ಬಿಬಿಎಂಪಿ ಡಿಪಿಆರ್‌ (ವಿಸ್ತೃತ  ಯೋಜನಾ ವರದಿ) ಸಿದ್ಧಪಡಿಸಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ದೊರಕುವ ಅನುದಾನದಲ್ಲಿ ಯೋಜನೆ ರೂಪಿಸಲು ಐಡೆಕ್‌ ( ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಸಂಸ್ಥೆಗೆ ಶೇ 1.31ರಷ್ಟು  ಯೋಜನಾ ವೆಚ್ಚ ನೀಡಲಾಗುತ್ತಿದೆ. ಎಸ್‌ಪಿವಿ (ಸ್ಪೆಷಲ್  ಪರ್ಪಸ್ ವೆಹಿಕಲ್‌) ಮೂಲಕ ಯೋಜನೆ ಜಾರಿ ಮಾಡಲಾಗುತ್ತದೆ. ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಯೋಜನೆ ಜಾರಿ, ನಿರ್ವಹಣೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಎಸ್‌ಪಿವಿ ನೋಡಿಕೊಳ್ಳಲಿದೆ ಎಂದು  ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಎಸ್‌ಪಿವಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರಾಗಿ ಸ್ಥಳೀಯ ಸಂಸ್ಥೆಯ ಆಯುಕ್ತರು ಜವಾಬ್ದಾರಿ ನಿರ್ವಹಿಸಲಿದ್ದಾರೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದಿಂದ ತಲಾ 6 ಅಧಿಕಾರಿಗಳು, ಕೇಂದ್ರ ಸರ್ಕಾರದ ಒಬ್ಬರು ಪ್ರತಿನಿಧಿ ಹಾಗೂ ಇಬ್ಬರು ನಗರ ತಜ್ಞರು ಎಸ್‌ವಿಪಿಯಲ್ಲಿ ಇರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಶಿವಾಜಿನಗರ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಆಟದ ಮೈದಾನಕ್ಕೆ ಹೊಸ ರೂಪ ನೀಡಲಾಗುತ್ತದೆ.  ಮೆಟ್ರೊ  ನಿಲ್ದಾಣ ಮತ್ತು ಬಸ್‌ ನಿಲ್ದಾಣವನ್ನು ಮೈದಾನದಿಂದ ನೇರವಾಗಿ ತಲುಪಲು ಇಡೀ ಆಟದ ಮೈದಾನವನ್ನು ಪುನರ್‌ ರೂಪಿಸಲಾಗುತ್ತದೆ. ಇದರಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಬಯಲು ರಂಗಮಂದಿರವೂ ಇರಲಿದೆ ಎಂದರು.

ಬಸ್‌ ನಿಲ್ದಾಣ ಪಕ್ಕದಲ್ಲಿರುವ ರಸೆಲ್‌ ಮಾರುಕಟ್ಟೆಯಲ್ಲಿ ಹೊಸ ಮಳಿಗೆ  ನಿರ್ಮಿಸಿ, ನಿಲ್ದಾಣದಿಂದ ಮಾರುಕಟ್ಟೆಗೆ ಹೋಗಲು ಪಾದಚಾರಿ ಸೇತುವೆ ಕಟ್ಟಲಾಗುವುದು. ಹತ್ತಿರದಲ್ಲೇ ಇರುವ ದೇವಸ್ಥಾನ ಮತ್ತು ಚರ್ಚ್‌ಗೆ ಹೋಗಲೂ ಪಾದಚಾರಿ ಸೇತುವೆ ನಿರ್ಮಿಸುವುದು ಯೋಜನೆಯಲ್ಲಿದೆ ಎಂದರು.

ಸುಮಾರು ₹140 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ, ರಸೆಲ್‌ ಮಾರುಕಟ್ಟೆ ಹಾಗೂ ಆಟದ ಮೈದಾನ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧವಿದೆ. ಸರ್ಕಾರೇತರ ಸಂಸ್ಥೆ ಜನಾಗ್ರಹ ಯೋಜನೆ ವಿನ್ಯಾಸ ಮಾಡಿಕೊಟ್ಟಿದೆ. ಟೆಂಡರ್‌ ಕರೆಯುವ ಪ್ರಕ್ರಿಯೆಗೂ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಕೆ.ಆರ್‌.ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಉತ್ತಮ ಸವಲತ್ತು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.