ADVERTISEMENT

ಕೆಎಂಸಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು: ‘ಹೆರಿಗೆಗೆ ದಾಖಲಾದ ನನ್ನ ಪತ್ನಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡದೆ, ಆಕೆಯ ಸಾವಿಗೆ ಕಾರಣರಾದ ವೈದ್ಯರಿಗೆ ಕರ್ನಾಟಕ  ವೈದ್ಯಕೀಯ ಮಂಡಳಿ (ಕೆಎಂಸಿ) ಕೇವಲ ಎಚ್ಚರಿಕೆ ನೀಡಿದೆ’ ಎಂದು ಮೃತಳ ಪತಿ ಮಿಲ್ಕ್‌ ಕಾಲೋನಿ ನಿವಾಸಿ ವಿ. ಸಂತೋಷ್‌ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2011 ಆಗಸ್ಟ್‌ 14ರಂದು ಪತ್ನಿ ಕವಿತಾ ಅವರನ್ನು ಹೆರಿಗೆಗಾಗಿ ಮಲ್ಲೇಶ್ವರದ ಲಕ್ಷ್ಮೀ ಮೆಟರ್ನಿಟಿ ಹೋಮ್‌ಗೆ ದಾಖಲಿಸಿದ್ದೆ. ಆದರೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಕವಿತಾ ಮಗುವಿಗೆ ಜನ್ಮ ನೀಡಿದ ನಂತರ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು’ ಎಂದರು.

‘ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯೆ ಲೀಲಾ ರಾವ್‌, ವೈದ್ಯೆ ವೀಣಾ ಶಿವಕುಮಾರ್‌, ವೈದ್ಯೆ ನಿಶ್ಚಿತಾ ಹಾಗೂ ಅರವಳಿಕೆ ತಜ್ಞ ವೈದ್ಯ ಸುರೇಂದ್ರ ಅವರ ವಿರುದ್ಧ ಕೆಎಂಸಿಗೆ ದೂರು ನೀಡಿದ್ದೆ’ ಎಂದರು.

‘ವಿಚಾರಣೆ ಸಮಯದಲ್ಲಿ ವೈದ್ಯೆ ವೀಣಾ ಅವರು ತಮ್ಮ ನೋಂದಣಿಯನ್ನು ನವೀಕರಿಸದೇ ಇರುವ ವಿಷಯ ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಅವರನ್ನು ಎರಡು ವರ್ಷ ಅಮಾನತುಗೊಳಿಸಿದ ಮಂಡಳಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ವೈದ್ಯರಿಗೆ ಕೇವಲ ಎಚ್ಚರಿಕೆ ನೀಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.