ADVERTISEMENT

ಕೆಜೆಪಿ ರಾಜ್ಯ ಕಾರ್ಯಕಾರಿಣಿಗೆ ಇಬ್ಬರು ಶಾಸಕರು ಗೈರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:27 IST
Last Updated 19 ಸೆಪ್ಟೆಂಬರ್ 2013, 20:27 IST

ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿ­ಸುವ ನಿರ್ಣಯ ಅಂಗೀಕರಿಸಿದ ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಿಂದ ಪಕ್ಷದ ಶಾಸಕರಾದ ಬಿ.ಆರ್‌.ಪಾಟೀಲ್‌ ಮತ್ತು ಗುರುಪಾದಪ್ಪ ನಾಗಮಾರಪಲ್ಲಿ ದೂರ ಉಳಿದಿದ್ದರು.

ಗುರುವಾರ ನಡೆದ ಕಾರ್ಯಕಾರಿಣಿ­ಯಲ್ಲಿ 165 ಸದಸ್ಯರು ಭಾಗವಹಿಸಿ­ದ್ದರು. ಪಕ್ಷದ ಅಧ್ಯಕ್ಷರೂ ಆಗಿರುವ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಆರು ಮಂದಿ ಶಾಸಕರು ಇದ್ದಾರೆ. ಯಡಿಯೂರಪ್ಪ, ಯು.ಬಿ.ಬಣಕಾರ್‌, ಗುರುಪಾಟೀಲ್‌ ಮತ್ತು ವಿಶ್ವನಾಥ ಪಾಟೀಲ್‌ ಸಭೆಗೆ ಹಾಜರಾಗಿದ್ದರು.

‘ಬಿ.ಆರ್‌.ಪಾಟೀಲ್‌ ಅವರ ಕ್ಷೇತ್ರ­ದಲ್ಲಿ ಕಾರ್ಯಕ್ರಮ ಇದ್ದ ಕಾರಣ ಸಭೆಗೆ ಬಂದಿರಲಿಲ್ಲ. ನಾಗಮಾರಪಲ್ಲಿ ಅವರಿಗೆ ಆರೋಗ್ಯ ಸರಿ ಇಲ್ಲ. ಇಬ್ಬರೂ ಪಕ್ಷದ ಅಧ್ಯಕ್ಷರ ಜೊತೆ ಮಾತ ನಾಡಿದ್ದರು. ನಂತರ ಭೇಟಿಯಾಗಿ ಚರ್ಚಿಸುವುದಾಗಿ ಮೊದಲೇ ತಿಳಿಸಿದ್ದರು’ ಎಂದು ಕೆಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀ ನಾರಾಯಣ ಈ ಕುರಿತು ಪ್ರತಿಕ್ರಿಯಿಸಿದರು.

ಬಿಜೆಪಿ ಜೊತೆ ಚುನಾವಣಾ ಮೈತ್ರಿ  ಹಾಗೂ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಯಡಿಯೂರಪ್ಪ ಅವರ ತೀರ್ಮಾನದಿಂದ ಅಸಮಾಧಾನ ಗೊಂಡಿರುವ ಕಾರಣದಿಂದಲೇ ಇಬ್ಬರೂ ಶಾಸಕರು ಕಾರ್ಯಕಾರಿಣಿಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.

ಕೆಜೆಪಿಯಲ್ಲಿದ್ದೇ ಮೋದಿಗೆ ಬೆಂಬಲ: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಸ್ತಿತ್ವ ಉಳಿಸಿಕೊಂಡೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಕೆಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಆರಂಭಿಸುವುದಕ್ಕೂ ನಿರ್ಧರಿಸಲಾಗಿದೆ.
ವಿಧಾನಸಭಾ ಚುನಾವಣೆ ಫಲಿ­ತಾಂಶ, ಪಕ್ಷದ ಹಿನ್ನಡೆಗೆ ಕಾರಣವಾದ ಅಂಶಗಳು ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಹೋರಾಟಕ್ಕೆ ನಿರ್ಧಾರ: ಇದೇ 23ರಿಂದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಲು ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ದಾವಣ­ಗೆರೆ­­ಯಲ್ಲಿ ಈ 23ರಂದು ನಡೆಯುವ ಸಮಾವೇಶದಲ್ಲಿ ಯಡಿಯೂರಪ್ಪ ಸೇರಿ­ದಂತೆ ಹಲವರು ಪಾಲ್ಗೊಳ್ಳುವರು. ಸರ್ಕಾರದ ವಿರುದ್ಧದ ಹೋರಾಟದ ಸಂದರ್ಭವನ್ನು ಕೆಜೆಪಿ ಸಂಘಟನೆಗೆ ಬಳಸಿಕೊಳ್ಳಲು ತೀರ್ಮಾನಿಸ­ಲಾಗಿದೆ.

10–12 ಕ್ಷೇತ್ರಗಳಲ್ಲಿ ಸ್ಪರ್ಧೆ: ಪಕ್ಷದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ 10ರಿಂದ 12 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ದಾವಣಗೆರೆ, ಶಿವಮೊಗ್ಗ, ವಿಜಾಪುರ, ತುಮಕೂರು, ಬೀದರ್‌, ಚಾಮರಾಜ­ನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಈಗಾಗಲೇ ಗುರುತಿಸ­ಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ­ಗಳನ್ನು ಗೆಲುವಿನ ದಡ ಸೇರಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದೇನೆ’ ಎಂದರು.

ಹೊಸ ಚಿಹ್ನೆಗೆ ಮನವಿ: ಕೆಜೆಪಿಗೆ ತೆಂಗಿನ ಕಾಯಿ ಚಿಹ್ನೆ ಬದಲಿಗೆ ನೇಗಿಲು ಹೊತ್ತ ರೈತ ಚಿಹ್ನೆ ನೀಡುವಂತೆ ಕೇಂದ್ರ ಚುನಾ­ವಣಾ ಆಯೋಗಕ್ಕೆ ಮನವಿ ಸಲ್ಲಿಸ­ಲಾಗಿದೆ. ಲೋಕಸಭಾ ಚುನಾ­ವಣೆಗೂ ಮುನ್ನವೇ ಹೊಸ ಚಿಹ್ನೆ ಕುರಿತು ಚುನಾ­ವಣಾ ಆಯೋಗ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದರು.

ಶೋಭಾ ಕರಂದ್ಲಾಜೆ, ಸಿ.ಎಂ.­ಉದಾಸಿ ಸೇರಿದಂತೆ ಹಲವರು ಸಭೆ­ಯಲ್ಲಿ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯ­ಕುಮಾರ್‌ ಮತ್ತಿತರರು  ಭಾಗವಹಿಸಿ­ದ್ದರು.  ಮಧ್ಯಾಹ್ನದ ಬಳಿಕ ಪಕ್ಷದ ಜಿಲ್ಲಾ­-ವಾರು ಮುಖಂಡರ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.