ADVERTISEMENT

ಕೆಟ್ಟ ಪಂಪ್‌ಸೆಟ್: ನೀರು ಪೂರೈಕೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ರಾಜರಾಜೇಶ್ವರಿನಗರ: ಸ್ವರ್ಗಕ್ಕೆ ಮೂರೇ ಗೇಣು ಎಂದು ಸಂತಸಪಡುತ್ತಿದ್ದ ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಶ್ರೀನಿವಾಸಪುರದ ರೈತರ ಮೊಗದಲ್ಲಿ ಈಗ ಬೇಸರ ಮನೆ ಮಾಡಿದೆ. ಏಕೆಂದರೆ, ವೃಷ ಭಾವತಿ ನದಿಯಿಂದ ಗ್ರಾಮದ ನೀರಾವರಿ ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರುಣಿಸುತ್ತಿದ್ದ ಪಂಪ್‌ಸೆಟ್ ಕೆಟ್ಟು ಹೋಗಿ ಹಲವು ವರ್ಷಗಳೇ ಕಳೆದರೂ ಇದುವರೆಗೂ ಅದರ ದುರಸ್ತಿ ಕಾಣಲು ಸಾಧ್ಯವಾಗಿಲ್ಲ.

1999ರಲ್ಲಿ ವೃಷಭಾವತಿ ನದಿಯಿಂದ ಗ್ರಾಮದ ಸುಮಾರು 550 ಎಕರೆ ಪ್ರದೇಶಕ್ಕೆ ಏತ ನೀರಾವರಿ ಮೂಲಕ ನೀರು ಹರಿಸಿದ್ದರಿಂದ ಸಮೃದ್ಧಿಯಾಗಿ ಬತ್ತ, ತೆಂಗು, ರೇಷ್ಮೆ , ಅಡಿಕೆ, ತರಕಾರಿ, ಹೂವು- ಹಣ್ಣು ಬೆಳೆದ ರೈತರು ನೆಮ್ಮದಿಯಿಂದ ಜೀವನ ಸಾಗಿದರು. ಇದರಿಂದ ರೈತರ ಬದುಕು ಕೂಡ ಹಸನಾಗಿತ್ತು. ~

ಆದರೆ ಏತನೀರಾವರಿ ಯೋಜನೆ ಪಂಪ್ ಸೆಟ್ ಕೆಟ್ಟು ಹೋಗಿ ಎಂಟೊಂಬತ್ತು ವರ್ಷಗಳೇ ಆದರೂ ಅದರ ದುರಸ್ತಿಯಾಗಿಲ್ಲ. ಪಂಪ್‌ಸೆಟ್ ಮತ್ತು ಅದರ ಕೋಣೆ ಸುತ್ತ ಗಿಡಗಂಟಿ, ಪೊದೆ, ಹುತ್ತ ಬೆಳೆದು ವಿಷ ಜಂತುಗಳು ವಾಸಿಸುವ ಮನೆಯಾಗಿದೆ.
ಈ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕೆಟ್ಟು ಹೋಗಿರುವ ಪಂಪ್ ಸೆಟ್ ರಿಪೇರಿಯಾಗಿಲ್ಲ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಚಿವರಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡರು.
ಶೋಭಾ ಕರಂದ್ಲಾಜೆ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಏತನೀರಾವರಿ ಯೋಜನೆಯ ಪಂಪ್‌ಸೆಟ್ ದುರಸ್ತಿ ಮಾಡಿಸುವುದಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ರೈತರು ಆರೋಪಿಸಿದ್ದಾರೆ.

ರೈತ ಮುಖಂಡರಾದ ಆರ್.ಲಕ್ಷ್ಮಯ್ಯ ಹಾಗೂ ಕೆ.ಎಂ.ರಾಮಚಂದ್ರ ಮಾತನಾಡಿ, `ರೈತರ ಉಳಿವಿಗೆ ಸರ್ಕಾರ ಸ್ಪಂದಿಸಬೇಕು. ರೈತರನ್ನು ಗುಲಾಮರಾಗಿ ಕಾಣುವ ಬದಲು ಯೋಜ ನೆಗೆ ಶೀಘ್ರ ಚಾಲನೆ ನೀಡಬೇಕು~ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT