ADVERTISEMENT

ಕೆಪಿಎಸ್‌ಸಿ ವಿರುದ್ಧ ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:49 IST
Last Updated 9 ಡಿಸೆಂಬರ್ 2013, 19:49 IST

ಬೆಂಗಳೂರು: 1998ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿ­ಎಸ್‌ಸಿ) ‘ಮಾಡರೇಷನ್‌’ ಪ್ರಕ್ರಿಯೆ­ಯನ್ನು ಸರಿಯಾಗಿ ನಡೆಸಿಲ್ಲ ಎಂದು ದೂರಿ ಡಾ.ಕೆ. ಮುರಳೀಧರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರು ಕೆಪಿಎಸ್‌ಸಿಗೆ ನೋಟಿಸ್‌ ಜಾರಿಗೆ ಸೋಮವಾರ ಆದೇಶಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ. ಮುರಳೀಧರ್‌ ಅವರು 1998ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾಗಿದ್ದರು.
ಕೆಪಿಎಸ್‌ಸಿ ಲಿಖಿತ ಪರೀಕ್ಷೆಯಲ್ಲಿ ಅವರಿಗೆ 1039 ಅಂಕ ಬಂದಿತ್ತು. ಸಂಭಾವ್ಯ ಆಯ್ಕೆ ಪಟ್ಟಿ­ಯಲ್ಲಿ ಅವರ ಹೆಸರಿತ್ತು. ಅವರಿಗೆ ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಹುದ್ದೆ ದೊರೆಯಲಿಕ್ಕಿತ್ತು.

ಆದರೆ ಈ ಸಂದರ್ಭದಲ್ಲಿ, ಕೆಲವು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ದೂರಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋದರು.

ಕೆಎಟಿ ನೀಡಿದ ಆದೇಶವನ್ನು ನಂತರ ಹೈಕೋರ್ಟ್‌­ನಲ್ಲಿ ಪ್ರಶ್ನಿಸಲಾಯಿತು. ಅಂತಿಮ ಆದೇಶ ನೀಡಿದ ಹೈಕೋರ್ಟ್‌ ವಿಭಾಗೀಯ ಪೀಠ, ‘ಮಾಡರೇಷನ್‌’ (ಆಯ್ದ ಕೆಲವು ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸು­ವುದು) ಪ್ರಕ್ರಿಯೆಯಲ್ಲಿ  ಮಾರ್ಪಾಡು ತರಲು ಸೂಚಿಸಿತು.

ಆದರೆ, ಹೈಕೋರ್ಟ್‌ ಹೇಳಿದಂತೆ ಮಾಡ­ರೇಷನ್‌ ನಡೆಸದ ಕಾರಣ, ತಮ್ಮ 201 ಅಂಕಗಳು ಕಡಿಮೆಯಾ-­ಗಿವೆ ಎಂದು ಮುರಳೀಧರ ಸಲ್ಲಿಸಿರುವ ಅರ್ಜಿ­ಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT