ADVERTISEMENT

ಕೆರೆಗಳ ಸಂರಕ್ಷಣೆಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಸಂರಕ್ಷಣೆ ಹಾಗೂ ಪುನರುಜ್ಜೀವನ ಕಾರ್ಯ ಕೈಗೊಳ್ಳಲು ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಾಗೆಯೇ ಕೆರೆ ಭೂಮಿ ಒತ್ತುವರಿ ತೆರವಿನ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಮಾಹಿತಿ ನೀಡಲಾಗುವುದು ಎಂದು ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರು ಗುರುವಾರ ಬಿಬಿಎಂಪಿ ಸಭೆಗೆ ತಿಳಿಸಿದರು.

ನಗರದ ಕೆರೆಗಳ ಸಂರಕ್ಷಣೆಗೆ ಸಂಬಂಧಪಟ್ಟಂತೆ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, `ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಮಾಡಲಾಗುವ ವೆಚ್ಚದಲ್ಲಿ ಶೇ 50ರಷ್ಟನ್ನು ಸರ್ಕಾರ ಭರಿಸಬೇಕಿದೆ. ಹಾಗಾಗಿ 119 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ~ ಎಂದರು.

`ಕೆರೆಗಳ ಸಂರಕ್ಷಣೆಗೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೆರೆ ಸಂರಕ್ಷಣೆಯು ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಾಮೂಹಿಕ ಜವಾಬ್ದಾರಿಯಾಗಿದೆ ಎಂಬುದಾಗಿ ಆದೇಶ ನೀಡಿದೆ~ ಎಂದು ಹೇಳಿದರು.

`ಕೆರೆಗಳ ಸಂರಕ್ಷಣೆ ಪಾಲಿಕೆಯ ಜವಾಬ್ದಾರಿಯಲ್ಲದಿದ್ದರೂ ಕೊಳಚೆ ನೀರಿನ ಸಮರ್ಪಕ ನಿರ್ವಹಣೆ ಪಾಲಿಕೆ ಹೊಣೆಗಾರಿಕೆಯಾಗಿದೆ. ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯಬೇಕಾಗಿರುವುದರಿಂದ ಕೆರೆ ರಕ್ಷಣೆ ಕೂಡ ಕರ್ತವ್ಯವಾಗಿ ಪರಿಣಮಿಸಿದೆ~ ಎಂದರು.

ಜಲಮಂಡಳಿ ಸಹಯೋಗದಲ್ಲಿ ಕೆರೆಗಳ ಬಳಿ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುವುದು. ಕೆರೆಗಳಿಗೆ ತ್ಯಾಜ್ಯ ಸುರಿದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಕೆರೆಯ ಸುತ್ತ ನಿಗದಿತ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಿರುವುದಕ್ಕೆ ಸಂಬಂಧಪಟ್ಟಂತೆ ಚರ್ಚಿಸಿ ನಿರ್ಧರಿಸಲಾಗುವುದು~ ಎಂದರು.

ಮಾಹಿತಿ: `ಪಾಲಿಕೆ ವ್ಯಾಪ್ತಿಯ 132 ಕೆರೆಗಳಲ್ಲಿ 358 ಎಕರೆಯಷ್ಟು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗೆ ಮಾಹಿತಿ ನೀಡಲಾಗುವುದು~ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮೊದಲು ಮಾತನಾಡಿದ ಪದ್ಮನಾಭ ರೆಡ್ಡಿ ಮಾತನಾಡಿ  ಅಧಿಕಾರಿಗಳು ತೆರವು ಕಾರ್ಯಕ್ಕೆ ಒತ್ತು ನೀಡಿಲ್ಲ  ಎಂದು ಆರೋಪಿಸಿದರು. `ಸದಸ್ಯರಾದ ಗುಣಶೇಖರನ್, ಪಿ.ಮುನಿಸ್ವಾಮಿ, ಕೆ. ಚಂದ್ರಶೇಖರ್ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.