ADVERTISEMENT

ಕೆರೆ ಉಳಿಸಲು ಪಣ: ಹೋರಾಟದ ಹಾದಿ ಹಿಡಿದ ಸರ್ಜಾಪುರ

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:17 IST
Last Updated 20 ಅಕ್ಟೋಬರ್ 2018, 19:17 IST
ಸರ್ಜಾಪುರ ದೊಡ್ಡಕೆರೆಯನ್ನು ಬೇಕಾಬಿಟ್ಟಿ ಅಗೆದುಹಾಕಿರುವ ದೃಶ್ಯ
ಸರ್ಜಾಪುರ ದೊಡ್ಡಕೆರೆಯನ್ನು ಬೇಕಾಬಿಟ್ಟಿ ಅಗೆದುಹಾಕಿರುವ ದೃಶ್ಯ   

ಬೆಂಗಳೂರು: ಸರ್ಜಾಪುರ ದೊಡ್ಡಕೆರೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿಯೆತ್ತಿದ ವಾಯ್ಸ್‌ ಆಫ್‌ ಸರ್ಜಾಪುರ ಸಂಘಟನೆ ಸದಸ್ಯರು ಠಾಣೆಯ ಮೆಟ್ಟಿಲೇರಿದ್ದಾರೆ. ಮಾತ್ರವಲ್ಲ ಉಪತಹಶೀಲ್ದಾರ್‌ಗೂ ಮನವಿ ಸಲ್ಲಿಸಿದ್ದಾರೆ.

‘ಒಂದು ವಾರದಿಂದ ಪ್ರತಿಭಟನೆ ಕಾವು ಪಡೆಯುತ್ತಿದೆ. ಎಚ್ಚೆತ್ತ ಪೊಲೀಸರು ಶುಕ್ರವಾರ ಎರಡು ಹಿಟಾಚಿ ಯಂತ್ರ, ಟ್ರಕ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹಾಗಿದ್ದರೂ ಬೆಳಿಗ್ಗೆ ಎರಡು ಟ್ರಕ್‌ಗಳಲ್ಲಿ ಮರಳು ಸಾಗಾಟ ನಡೆದಿದೆ’ ಎಂದು ಸಂಘಟನೆಯ ಸದಸ್ಯೆ ದೀಪಾಂಜಲಿ ಹೇಳಿದರು.

‘ಪ್ರತಿ ಶನಿವಾರ ಸಭೆ ನಡೆಸಿ ಹಂತಹಂತವಾಗಿ ಹೋರಾಟ ರೂಪಿಸುತ್ತಿದ್ದೇವೆ. ನಮ್ಮ ಮನವಿಗೆ ಅಧಿಕಾರಿಗಳ ಪ್ರತಿಕ್ರಿಯೆ ನೋಡಿ ಮುಂದಿನ ಹೋರಾಟ ನಡೆಸುತ್ತೇವೆ’ ಎಂದು ಅವರು ಹೇಳಿದರು.

ADVERTISEMENT

ಕೆರೆಯ ಸ್ಥಿತಿ ಹೇಗಿದೆ?: ‘ಕೆರೆ ಸಂಪೂರ್ಣ ಆಕಾರ ಕಳೆದುಕೊಂಡಿದೆ. ಶೇ 80ರಷ್ಟು ಭಾಗ ನಾಶವಾಗಿದೆ. ಮರಳಿಗಾಗಿ ಕೆರೆಯೊಳಗೆ ಹತ್ತಾರು ಅಡಿ ಆಳ ಅಗೆಯಲಾಗಿದೆ. ಮಣ್ಣುಸಹಿತ ಮರಳು ಎತ್ತಲಾಗಿದೆ. ಖಾಲಿ ಜಾಗಕ್ಕೆ ಕೆರೆ ಸುತ್ತಮುತ್ತಲಿನ ಮರಗಳನ್ನು ಬುಡಸಹಿತ ಕಡಿದು ಹೊಂಡಗಳಿಗೆ ಹಾಕಲಾಗಿದೆ. ಅಂತರ್ಜಲದ ಒರತೆ ಪೂರ್ತಿ ಬತ್ತಿದೆ’ ಎಂದು ಸ್ಥಳೀಯರು ಹೇಳಿದರು.

‘ಒಂದು ಪಾರ್ಶ್ವದ ಕೆರೆ ದಂಡೆ ಪೂರ್ತಿ ನಾಶವಾಗಿದೆ. ಸರ್ಜಾಪುರ– ದೊಡ್ಡಕೆರೆ ಸಂಪರ್ಕಿಸುವ ರಸ್ತೆಯ ಡಾಂಬರು ಪೂರ್ತಿ ಕಿತ್ತುಹೋಗಿದೆ. ಈ ಕೆರೆ ಪ್ರದೇಶಕ್ಕೆ ಸ್ಥಳೀಯರು ಸುಲಭವಾಗಿ ಹೋಗುವಂತಿಲ್ಲ. ದಿನಪೂರ್ತಿ ನಿಗಾವಹಿಸಲು ದಂಧೆಕೋರರು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಯಾರಾದರೂ ಪ್ರಶ್ನಿಸಿದರೆ ಅವರ ಮೇಲೆ ರೌಡಿಗಳನ್ನು ಬಿಟ್ಟು ಬಲಪ್ರಯೋಗ ಮಾಡಲಾಗುತ್ತದೆ. ಭಯದ ವಾತಾವರಣ ಸೃಷ್ಟಿಯಾಗಿದೆ’ ಎಂದು ಅಳಲು ತೋಡಿಕೊಂಡರು.

‘200 ಎಕರೆಯಷ್ಟು ವಿಸ್ತಾರದ ಈ ಕೆರೆ ಜೀವ ವೈವಿಧ್ಯದ ನೆಲೆಯಾಗಿತ್ತು. ಸುತ್ತಮುತ್ತಲಿನ 8ರಿಂದ 10 ಹಳ್ಳಿಗಳ ಅಂತರ್ಜಲ ಹೆಚ್ಚಲು ಇದು ಕಾರಣವಾಗಿತ್ತು. ಈಗ ಎಲ್ಲವೂ ನಾಶ ವಾಗಿದೆ’ ಎಂದು ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರೈತರು ಹೇಳಿದರು. ಸಂಜೆ ವೇಳೆ ವಿಜ್ಞಾನಿ ಜಗ ದೀಶ್ವರ್‌, ಸಂಘಟನೆಯ ಮಾಜಿ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.