ADVERTISEMENT

ಕೆರೆ ಒತ್ತುವರಿಗೆ ಕೋಳಿವಾಡ ವರದಿ ರಕ್ಷಣೆ

ಸಂವಾದದಲ್ಲಿ ನಾಗರಿಕ ಸಂಘಟನೆಗಳ ಪ್ರಮುಖರಿಂದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 20:13 IST
Last Updated 9 ಡಿಸೆಂಬರ್ 2017, 20:13 IST
ಸಜನ್ ಪೂವಯ್ಯ ಮಾತನಾಡಿದರು. (ಎಡದಿಂದ) ಎನ್.ಎಸ್.ಮುಕುಂದ, ‌ವೀಣಾ ಶ್ರೀನಿವಾಸನ್, ರಾಮಪ್ರಸಾದ್ ಇದ್ದಾರೆ - ಪ್ರಜಾವಾಣಿ ಚಿತ್ರ
ಸಜನ್ ಪೂವಯ್ಯ ಮಾತನಾಡಿದರು. (ಎಡದಿಂದ) ಎನ್.ಎಸ್.ಮುಕುಂದ, ‌ವೀಣಾ ಶ್ರೀನಿವಾಸನ್, ರಾಮಪ್ರಸಾದ್ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದ ಕೆರೆಗಳ ಒತ್ತುವರಿಗಳನ್ನು ಸಕ್ರಮಕ್ಕೆ ಕೋಳಿವಾಡ ಸಮಿತಿಯ ವರದಿ ಹಿಂಬಾಗಿಲಿನ ಮುಕ್ತ ಪ್ರವೇಶ ಕಲ್ಪಿಸಿದೆ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ ಸಂಘಟನೆಯ ಸಂಸ್ಥಾಪಕ ಸದಸ್ಯ ರಾಮಪ್ರಸಾದ್‌ ಟೀಕಿಸಿದರು.

ಯುನೈಟೆಡ್‌ ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕೆರೆ ಒತ್ತುವರಿ ಮೇಲಿನ ಸದನ ಸಮಿತಿ (ಕೋಳಿವಾಡ) ವರದಿ ಮತ್ತು ಪರಿ
ಷ್ಕೃತ ಮಾಸ್ಟರ್‌ ಪ್ಲಾನ್ –2031 ನಮ್ಮ ಬೆಂಗಳೂರನ್ನು ಹಿಂಪಡೆಯಲು ಸಹಕಾರಿಯೇ’ ಕುರಿತಸಂವಾದದಲ್ಲಿ ಅವರು ಮಾತನಾಡಿದರು.

‘ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿರುವ ಚಿತ್ರನಟ ದರ್ಶನ್‌ ಅವರ ಮನೆ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ಹಾಗೂ ಕೆರೆ ಕಬಳಿಸಿರುವ ಬಾಗ್ಮನೆ ಟೆಕ್‌ಪಾರ್ಕ್‌ ಕಟ್ಟಡ ಸಂಕೀರ್ಣಕ್ಕೆ ಕೋಳಿವಾಡ ಸಮಿತಿಯ ವರದಿ ರಕ್ಷಣೆ ಕೊಡುವಂತಿದೆ. ಅಕ್ರಮವನ್ನು ಪರಿಣಾಮಕಾರಿಯಾಗಿ ಸಕ್ರಮ ಮಾಡಿಕೊಳ್ಳಲು ಈ ವರದಿ ದಾರಿ ತೋರುವಂತಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕೆರೆಗಳ ಒತ್ತುವರಿಗಳನ್ನು ಅಧಿಕೃತವಾಗಿ ಸಕ್ರಮಗೊಳಿಸಿ, ಒತ್ತುವರಿದಾರರಿಗೆ ಹೇಗೆ ಹಸ್ತಾಂತರಿಸಬೇಕೆಂದು ಕೋಳಿವಾಡ ಸಮಿತಿಯ ವರದಿ ಚೆನ್ನಾಗಿ ಹೇಳಿದೆ. ನೀರಿನ ಭದ್ರತೆಗಾಗಿ ಮೀಸಲಾಗಿರುವ ಕೆರೆಗಳನ್ನು ಒತ್ತುವರಿ ಮಾಡಿ, ದುರುಪಯೋಗಪಡಿಸಿಕೊಂಡವರ ಸ್ವಾಧೀನಕ್ಕೆ ಕೊಡುವುದು ಸರಿಯಲ್ಲ. ಲಕ್ಷಾಂತರ ಜನರ ಕುಡಿಯುವ ನೀರಿನ ವ್ಯವಸ್ಥೆ ನಾಶವಾದರೂ ಪರವಾಗಿಲ್ಲ, ಖಾಸಗಿ ಕಂಪನಿಗಳ ಹಿತ ಕಾಯ
ಬೇಕೆನ್ನುವ ಧೋರಣೆ ಅತ್ಯಂತ ಅಪಾಯಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಭೂರಹಿತರಿಗೆ ಬಗರ್‌ಹುಕುಂ ಅಡಿ ‘ಬಿ’ ಖರಾಬು ಭೂಮಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಸಾಗರದಲ್ಲೇ 40,000 ಬಗರ್‌ಹುಕುಂ ಸಾಗುವಳಿ ಅರ್ಜಿಗಳು ಸಲ್ಲಿಕೆಯಾಗಿವೆ. ಒಂದೇ ಭಾಗದಿಂದ ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿರುವುದರ ಹಿಂದೆ, ಅವರ ಮಕ್ಕಳು ಅಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಹಿತಾಸಕ್ತಿ ಕಾಣಿಸುತ್ತಿದೆ. ಒತ್ತುವರಿ ಅಕ್ರಮ–ಸಕ್ರಮವನ್ನು ಚುನಾವಣಾ ದೃಷ್ಟಿಯಿಂದ ನೋಡುಬೇಕಾಗಿದೆ’ ಎಂದರು.

ಸುಪ್ರೀಂಕೋರ್ಟ್‌ ವಕೀಲ ಸಜನ್‌ ಪೂವಯ್ಯ, ‘ಕೋಳಿವಾಡ ಸಮಿತಿ ನೀಡಿರುವ ಮಧ್ಯಂತರ ವರದಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹಾಗಂತ ಅದೂ ಕಾನೂನು ಬಾಹಿರವೂ ಅಲ್ಲ. ಅದು ಸಲಹೆ ಮತ್ತು ಶಿಫಾರಸು ಮಾತ್ರ. ಅದನ್ನು ಏಕೆ ಅನುಷ್ಠಾನಗೊಳಿಸಿಲ್ಲವೆಂದು ಸರ್ಕಾರವನ್ನೂ ಪ್ರಶ್ನಿಸುವಂತಹ ಕಾನೂನು ಚೌಕಟ್ಟಿನೊಳಗೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೆರೆಗಳ ರಕ್ಷಣೆಗೆ ವರದಿಯಲ್ಲಿ ಬೇಕಾದಷ್ಟು ಸಲಹೆಗಳಿವೆ, ಹಾಗೆಯೇ ಲೋಪಗಳೂ ಸಾಕಷ್ಟಿವೆ. ಸರ್ಕಾರ ಮತ್ತು ಸರ್ಕಾರದ ಅಂಗಸಂಸ್ಥೆಗಳಿಂದ ಆಗಿರುವ ಒತ್ತುವರಿ ತೆರವು ಮಾಡಬಾರದೆಂದು ಹೇಳಲಾಗಿದೆ. ಆದರೆ, ಇದು ಕಾನೂನು ಬಾಹಿರ. ಕೆರೆಗಳನ್ನು ಜೀವಂತ ಮತ್ತು ಮೃತ ಕೆರೆಗಳೆಂದು ನಿರ್ಧರಿಸಲು ಈ ಸಮಿತಿಗೆ ಕಾನೂನಾತ್ಮಕ ಆಧಾರಗಳಿಲ್ಲ. ಒಂದು ಬಾರಿ ಕೆರೆಯೆಂದು ದಾಖಲಾದರೆ, ನೀರು ಇರಲಿ ಅಥವಾ ಬತ್ತಿರಲಿ ಅದನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ’ ಎಂದರು.

ಅಶೋಕ ಪರಿಸರ ಸಂಶೋಧನಾ ಹಾಗೂ ಸಂರಕ್ಷಣಾ ಸಂಸ್ಥೆಯ (ಏಟ್ರಿ) ವಿಜ್ಞಾನಿ ವೀಣಾ ಶ್ರೀನಿವಾಸನ್‌, ‘ಅಂತರ್ಜಲ ಮರುಪೂರಣಕ್ಕೆ ಕೆರೆಗಳನ್ನು ಸಂರಕ್ಷಿಸಬೇಕು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳನ್ನು ನಾಶಪಡಿಸಲಾಗುತ್ತಿದೆ. ಕೆರೆಗಳ ಸಂಪರ್ಕ ಕೊಂಡಿಯಾಗಿರುವ ರಾಜ
ಕಾಲುವೆಗಳಿಗೆ ಕೊಳಚೆ ನೀರು ಹರಿಯಬಿಟ್ಟು, ಕೆರೆಗಳಿಗೆ ಕೊಳಚೆ ನೀರು ಸೇರಬಾರದೆಂದು ರಾಜಕಾಲುವೆಗಳ ಮಾರ್ಗವನ್ನೇ ಬದಲಿಸಲಾಗುತ್ತಿದೆ. ಇದರಿಂದ ಕೆರೆಗಳಿಗೆ ಮಳೆ ನೀರು ಹರಿಯದೆ, ಒಣಗುತ್ತಿವೆ’ ಎಂದು  ಅಭಿಪ್ರಾಯಪಟ್ಟರು.

ಜಲಸಂರಕ್ಷಣ ತಜ್ಞ ಎಸ್‌.ವಿಶ್ವನಾಥ್‌, ‘ಪರಿಷ್ಕೃತ ಮಾಸ್ಟರ್‌ ಪ್ಲಾನ್‌–2031ರಲ್ಲಿ ಲಿಂಗನಮಕ್ಕಿಯಿಂದ 20 ಟಿಎಂಸಿ ಅಡಿ ನೀರನ್ನು ನಗರಕ್ಕೆ ಸರಬರಾಜು ಮಾಡುವ ₹10,000 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವವನ್ನು ಜಲಮಂಡಳಿ ಇಟ್ಟಿದೆ. ಆದರೆ, ನಗರದ ಅಂತರ್ಜಲದ ಮೂಲವಾದ ಕೆರೆಗಳ ಸಂರಕ್ಷಣೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ಜಲಮೂಲಗಳ ಸಂರಕ್ಷಣೆಗೆ ಸಮಗ್ರ ಯೋಜನೆಯ ಅಗತ್ಯವೂ ಇದೆ’ ಎಂದರು.

* ಬೆಂಗಳೂರು ರಕ್ಷಣೆಗೆ ಕಾನೂನು ಹೋರಾಟ ನಡೆಸಲು ಹಣಕಾಸು ನೆರವು ಅವಶ್ಯವಿದ್ದು, ‘ಬೆಂಗಳೂರು ಪ್ರೊಟೆಕ್ಷನ್‌ ಫಂಡ್‌’ ಸ್ಥಾಪಿಸಲಾಗುವುದು

 - ರಾಜೀವ್‌ ಚಂದ್ರಶೇಖರ್‌, ರಾಜ್ಯಸಭೆ ಸದಸ್ಯ

* ಕೆರೆ ಒತ್ತುವರಿ ಸಕ್ರಮ ದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಈಗಾಗಲೇ ರಾಜ್ಯದಲ್ಲಿದ್ದ 40,000 ಕೆರೆಗಳ ಸಂಖ್ಯೆ 20,000ಕ್ಕೆ ಇಳಿದಿದೆ.

  - ಎನ್‌.ಎಸ್‌.ಮುಕುಂದ, ಸಿಟಿಜನ್‌ ಆಕ್ಷನ್‌ ಫೋರಂ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.