ADVERTISEMENT

ಕೆರೆ ಖಾಸಗೀಕರಣ: ಮಾ 12 ರಂದು ಅಂತಿಮ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 20:00 IST
Last Updated 24 ಫೆಬ್ರುವರಿ 2012, 20:00 IST

ಬೆಂಗಳೂರು: ನಗರದ ಹೆಬ್ಬಾಳ, ನಾಗವಾರ, ಅಗರ ಹಾಗೂ ವೆಂಗಯ್ಯನ ಕೆರೆಗಳನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ಕೊಡುವಾಗ ವಿಧಿಸಲಾಗಿರುವ ಷರತ್ತುಗಳನ್ನು ಹೈಕೋರ್ಟ್ ಪರಿಶೀಲಿಸಬಯಸಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿ ಕೆ.ಶ್ರೀಧರರಾವ್ ನೇತೃತ್ವದ ವಿಭಾಗೀಯ ಪೀಠ  ಶುಕ್ರವಾರ ಆದೇಶಿಸಿದೆ.

ಖಾಸಗಿ ನಿರ್ವಹಣೆ ವಿರುದ್ಧ ಪರಿಸರವಾದಿ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

ಹೈದರಾಬಾದ್ ಮೂಲದ ಬಯೋಟಾ ನ್ಯಾಚುರಲ್ ಸಿಸ್ಟಮ್ಸಗೆ ಅಗರ ಮತ್ತು ವೆಂಗಯ್ಯನಕೆರೆಯನ್ನು, ಈಸ್ಟ್ ಇಂಡಿಯಾ ಹೋಟೆಲ್ಸ್ ಲಿಮಿಟೆಡ್‌ಗೆ ಹೆಬ್ಬಾಳ ಕೆರೆಯನ್ನು ಹಾಗೂ ಲುಂಬಿನಿ ಗಾರ್ಡನ್ಸ್ ಲಿಮಿಟೆಡ್‌ಗೆ ನಾಗವಾರ ಕೆರೆಯನ್ನು ವಹಿಸುವ ಸಂಬಂಧ ನಡೆದಿರುವ ಒಪ್ಪಂದಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದರಿಂದ ಕೆರೆಗಳ ಖಾಸಗೀಕರಣ ಆಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ.

ಈ ವಿವಾದದ ಅಂತಿಮ ವಿಚಾರಣೆಯನ್ನು ಮಾರ್ಚ್ 12ಕ್ಕೆ ನಡೆಸುವುದಾಗಿ ತಿಳಿಸಿದ ಪೀಠ, ಅಂದು ಹೆಚ್ಚಿನ ಮಾಹಿತಿ ನೀಡುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.