ADVERTISEMENT

ಕೆಲವರಿಗಾಗಿ ಮಾತ್ರ ಸರ್ಕಾರ: ಹೆಗ್ಡೆ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಕೆಲವರಿಗಾಗಿ ಮಾತ್ರ ಸರ್ಕಾರ: ಹೆಗ್ಡೆ ಕಿಡಿ
ಕೆಲವರಿಗಾಗಿ ಮಾತ್ರ ಸರ್ಕಾರ: ಹೆಗ್ಡೆ ಕಿಡಿ   

ಬೆಂಗಳೂರು: ‘ಜನರ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ರಾಜ್ಯ ಸರ್ಕಾರ ಕೆಲವರಿಂದ, ಕೆಲವರಿಗಾಗಿ, ಕೆಲವರ ಸರ್ಕಾರವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮೀರಿದ್ದು, ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಇದನ್ನು ಜನರು ಎಂದಿಗೂ  ಸಹಿಸುವುದಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನಜಾಗೃತಿ     ಅಭಿಯಾನವು ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿಸಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭ್ರಷ್ಟಾಚಾರವನ್ನು ವಿರೋಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಈಜಿಪ್ಟ್, ಬಹರೇನ್‌ಗಳಲ್ಲಿ ನಡೆದಂತಹ ಕ್ರಾಂತಿಗಳು ದೇಶದಲ್ಲಿಯೂ ನಡೆಯುತ್ತವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಎಚ್ಚರಿಸಿದರು.

‘ಭ್ರಷ್ಟಾಚಾರದ ವಿರುದ್ಧ ಕ್ರಾಂತಿ ಮಾಡುವುದು ಬೇಡ. ಏಕೆಂದರೆ ಪ್ರತಿ ಸರ್ಕಾರಗಳು ಹಿಂದಿನ ಸರ್ಕಾರಗಳಿಗಿಂತ ಹೆಚ್ಚು ಭ್ರಷ್ಟವಾಗುತ್ತಿವೆ. ಕ್ರಾಂತಿ ನಡೆಸಿ, ಭ್ರಷ್ಟರನ್ನು ಕುರ್ಚಿಯಿಂದ ಕೆಳಗಿಳಿಸಿದ ನಂತರ ಮತ್ತೆ ಭ್ರಷ್ಟರೇ ಕೂರುತ್ತಾರೆ. ಆದ ಕಾರಣ ಕ್ರಾಂತಿಯ ಬದಲಿಗೆ ಚಳವಳಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟರನ್ನು ಬಹಿಷ್ಕರಿಸಿ:  ‘ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಬೆರಳೆಣಿಕೆಯಷ್ಟು ಮಾತ್ರ ಭ್ರಷ್ಟರಿದ್ದರು. ಆದರೆ ಇಂದು ಪ್ರಾಮಾಣಿಕರನ್ನು  ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ನಿವೃತ್ತಿ ಹೊಂದಿದ ನಂತರ ಭ್ರಷ್ಟಾಚಾರ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ’ ಎಂದು ಹೇಳಿದರು.

ಹೈಕೋರ್ಟ್‌ನ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ‘ಭ್ರಷ್ಟಾಚಾರದ ವಿರುದ್ಧ ಕ್ರಾಂತಿ ಮಾಡಬಾರದು ಎಂದಾದರೆ ಭ್ರಷ್ಟರ ‘ಕಪಾಳ’ಕ್ಕೆ ಹೊಡೆಯುವ ಪ್ರಯತ್ನವನ್ನಾದರೂ ಮಾಡಬೇಕು’ ಎಂದರು. ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಜಯ ಗಳಿಸಲು ಮಹಿಳೆಯರಿಗೆ ಸೀರೆ ಹಂಚಿದರು. ಇದು ಪುರುಷರಿಗೆ ಮಾಡಿದ ಅವಮಾನ. ಪ್ರಜಾತಂತ್ರದ ಆಧಾರಸ್ತಂಭಗಳಾದ ಜನರೇ ತಮ್ಮ ಮತವನ್ನು ಮಾರಾಟ ಮಾಡಿ ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂಲಂಚ ಸ್ವೀಕರಿಸುವುದಿಲ್ಲ, ನೀಡುವುದಿಲ್ಲ ಎಂದು ಯುವಜನರು ಪ್ರತಿಜ್ಞೆ ಮಾಡಬೇಕು’ ಎಂದು ಕರೆ ನೀಡಿದರು.

ಶತಕ ವೀರರ ವಿಕೆಟ್ ಉರುಳಿಸಿ: ‘ಹಗರಣದಲ್ಲಿ ತೊಡಗಿದ್ದ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಲೋಕಾಯುಕ್ತ ಪೊಲೀಸರು ಸರ್ಕಾರದ ಒಂದು ವಿಕೆಟ್ ಉರುಳಿಸಿದ್ದಾರೆ. ಅಂತೆಯೇ ಭ್ರಷ್ಟಾಚಾರದಲ್ಲಿ ಶತಕ ವೀರರಾಗಿರುವವರ ವಿರುದ್ಧವೂ ಎಫ್‌ಐಆರ್ ದಾಖಲಿಸಿ ವಿಕೆಟ್   ಉರುಳಿಸುತ್ತಾರೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಿಕ್ಷಣ ಆಂದೋಲನ ಸಂಘಟನಾಕಾರರಾದ ಕೆ.ಉಮಾ, ರೈತ ಚಳವಳಿಯ ಸಂಘಟನಾಕಾರ ಎಚ್.ವಿ.ದಿವಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.