ADVERTISEMENT

ಕೈಗಾರಿಕೋದ್ಯಮಿಗಳಿಗೆ ಸಹಕಾರ: ಕ್ಯಾ.ಗೋಪಿನಾಥ್ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: `ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗುವ ಉದ್ದೇಶಕ್ಕಾಗಿ ರಾಜ್ಯದ ಎರಡನೇ ಹಂತದ ನಗರಗಳಿಗೆ ವಿಮಾನ ಹಾರಾಟ ಕಲ್ಪಿಸಲು ವಿಮಾನಯಾನ ಪ್ರವರ್ತಕ ಕ್ಯಾಪ್ಟನ್ ಗೋಪಿನಾಥ್ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂದು ಬೃಹತ್ ಮತ್ತುಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ರಾಜಾಜಿನಗರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆಯು ಶನಿವಾರ ಏರ್ಪಡಿಸಿದ್ದ ವ್ಯಾಪಾರಿಗಳ ಅಭಿವೃದ್ಧಿ ಕುರಿತು ರಾಷ್ಟ್ರೀಯ ಸಮ್ಮೇಳನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, `ರಾಜ್ಯದ ಎರಡನೇ ಹಂತದ ನಗರಗಳಾದ ಗುಲ್ಬರ್ಗ, ಬೆಳಗಾವಿ, ಮೈಸೂರು ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂದು ಅವರು ಹೇಳಿದರು.

`3 ವರ್ಷಗಳಲ್ಲಿ 12 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ವಿಜಾಪುರ ಜಿಲ್ಲೆಯ ಕೂಡಗಿಯಲ್ಲಿ ಮೂರು ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಕೈಗಾರಿಕೆಗಾಗಿ ರಾಜ್ಯದಲ್ಲಿ 1.25 ಲಕ್ಷ ಹೆಕ್ಟೇರ್ ಭೂಮಿಯನ್ನು ಗುರುತಿಸಲಾಗಿದ್ದು, ಇದರ ಪೈಕಿ 36 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಅಧಿಸೂಚನೆಯನ್ನು ಹೊರಡಿಸಲಾಗಿದೆ' ಎಂದು ತಿಳಿಸಿದರು.

`ಸಣ್ಣ ಕೈಗಾರಿಕಾ ಇಲಾಖೆಯನ್ನು ಪ್ರತ್ಯೇಕ ಸಚಿವಾಲಯವನ್ನು ಮಾಡಲು ಉದ್ದೇಶಿಸಲಾಗಿದ್ದು, ಇದರಿಂದ ಅಧಿಕಾರಿಗಳಿಗೆ ಕೆಲಸ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ. 3 ಕೋಟಿ ಇರುವ ಸಣ್ಣ ಕೈಗಾರಿಕೆಗಳನ್ನು 15 ಕೋಟಿಗೆ ವಿಸ್ತರಿಸಲಾಗಿದೆ' ಎಂದರು.

ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ಮಾತನಾಡಿ, `ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡಿ, ಅವುಗಳಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಇಲಾಖೆ ನೀಡಲು ಸಿದ್ದವಿದ್ದು, ಟ್ರೇಡ್ ಲೈಸನ್ಸ್‌ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರದಲ್ಲಿ ನಿವಾರಿಸಲಾಗುವುದು' ಎಂದು ತಿಳಿಸಿದರು.

ಸಮಾರಂಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಸ್. ಎಂ.ಜಮಖಂಡಿ,  ಎಫ್‌ಕೆಸಿಸಿಐ ಅಧ್ಯಕ್ಷ ಕೆ.ಶಿವಷಣ್ಮುಗಂ, ಕಾಸಿಯಾ ಅಧ್ಯಕ್ಷ ಎ.ವಿಜಯೇಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.